ಮತ್ತೆ ಕರ್ನಾಟಕ ಒಡೆಯುವ ಮಾತನಾಡಿದ ಕತ್ತಿ
ಬೆಳಗಾವಿ, ಸೆ. 13 : ಮಾಜಿ ಸಚಿವ ಉಮೇಶ್ ಕತ್ತಿ ಮತ್ತೊಮ್ಮೆ ಕರ್ನಾಟಕವನ್ನು ಒಡೆಯುವ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷಿಸಿದೆ. ಆದ್ದರಿಂದ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಮಾತನಾಡಿದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ಜನರು ಸಂಕಷ್ಟಕ್ಕೆ ಸಲುಕಿದ್ದರು, ಸರ್ಕಾರ ಸರಿಯಾದ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಈ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ರಾಜ್ಯ ಮಾಡಿ, ಬೆಳಗಾವಿಯನ್ನು ಅದರ ರಾಜಧಾನಿಯನ್ನಾಗಿ ಮಾಡಲಿ ಎಂದರು. [ಕನ್ನಡಿಗರ ನೆತ್ತಿಯ ಮೇಲೆ ಬಿಜೆಪಿಯ ತೂಗುಕತ್ತಿ]

ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಉಮೇಶ್ ಕತ್ತಿಯಾವರು, ನೆರೆಯ ಮಹಾರಾಷ್ಟ್ರದಲ್ಲಿರುವಂತೆ ಕರ್ನಾಟಕದಲ್ಲಿಯೂ ಎರಡು ರಾಜಧಾನಿಯನ್ನು ಮಾಡಬಹುದು. ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು ಎಂದು ಅವರು ಹೇಳಿದರು. [ನಾನಿಲ್ದಿದ್ರೇನಂತೆ ನನ್ ಮಗನಾದ್ರೂ ಮುಖ್ಯಮಂತ್ರಿಯಾಗ್ಲಿ]
ವಾಟಾಳ್ ಪ್ರತಿಕ್ರಿಯೆ : ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕು ಎಂಬ ಉಮೇಶ್ ಕತ್ತಿ ಅವರ ಹೇಳಿಕೆಯನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಖಂಡಿಸಿದ್ದಾರೆ. ಕತ್ತಿ ಅವರ ನಾಲಿಗೆ ಭದ್ರ ಇಲ್ಲ, ಹಿಂದೆಯೂ ಹಲವಾರು ಬಾರಿ ಅವರು ಹೀಗೆ ಹೇಳಿದ್ದರು. ಅವರ ಮಾತಿಗೆ ಮನ್ನಣೆ ಕೊಡುವ ಅಗತ್ಯವಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿ ಬಗ್ಗೆ ಮಾತನಾಡುವ ಸಚಿವ ಉಮೇಶ್ ಕತ್ತಿ ಅವರು, ಸಚಿವರಾಗಿದ್ದಾಗ ಆ ಭಾಗದಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ವಾಟಾಳ್, ಕರ್ನಾಟವನ್ನು ಒಡೆಯವ ಯಾವುದೇ ಹೇಳಿಕೆ ಮನ್ನಣೆ ನೀಡಬೇಡಿ ಎಂದು ಕರೆ ನೀಡಿದ್ದಾರೆ.












Click it and Unblock the Notifications