ಈ ರಸ್ತೆಗೆ ಟೋಲ್ ಶುಲ್ಕ ಬೇಡ: ಕೇಂದ್ರ ಸಚಿವರಿಗೆ ಜಗದೀಶ್ ಶೆಟ್ಟರ್ ಪತ್ರ
ಬೆಳಗಾವಿ, ಅಕ್ಟೋಬರ್ 13: ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಅಥವ ರಿಪೇರಿ ನಡೆಯುವಾಗಲೂ ರಸ್ತೆಗಳಲ್ಲಿ ಟೋಲ್ ಸಂಗ್ರಹ ಮಾಡುವ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗುತ್ತದೆ. ಈಗ ಕರ್ನಾಟಕದಲ್ಲಿಯೂ ಈಗ ರಿಪೇರಿ ನಡೆಯುತ್ತಿರುವ ರಸ್ತೆಗೆ ಟೋಲ್ ಸಂಗ್ರಹ ಬೇಡ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರವನ್ನು ಬರೆದಿದ್ದಾರೆ. ಬೆಳಗಾವಿ-ಸಂಕೇಶ್ವರ-ಕೊಲ್ಲಾಪುರ- ಕರಾಡ ನಡುವಿನ ರಸ್ತೆಗೆ ಸದ್ಯ ಟೋಲ್ ಸಂಗ್ರಹ ಬೇಡ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಆದರೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ಕುರಿತು ಸಂಸದರು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ, 'ಬೆಳಗಾವಿ-ಸಂಕೇಶ್ವರ-ಕೊಲ್ಲಾಪುರ- ಕರಾಡ ನಡುವೆ ನಿರ್ಮಾಣಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯು ಆಮೆ ಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾರರು ತಾವು ಮುಟ್ಟಬೇಕಾದ ನಗರಕ್ಕೆ ಹೆಚ್ಚಿನ ಸಮಯಾವಕಾಶ ಬೇಕಾಗಿತ್ತಿರುವುದರಿಂದ ಹತ್ತಿರದ ಟೋಲ್ ಪ್ಲಾಜಾದಲ್ಲಿ ಪಾವತಿಸಬೇಕಾದ ಶುಲ್ಕವನ್ನು ಸಾರ್ವಜನಿಕರು ವಿರೋಧಿಸುತ್ತಿರುವುದನ್ನು ಕೇಂದ್ರ ಸಾರಿಗೆ ಸಂಪರ್ಕ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಪತ್ರದ ಮುಖೇನ ವಿಷಯ ತಿಳಿಸಲಾಗಿದೆ' ಎಂದು ಹೇಳಿದ್ದಾರೆ.
ಶೆಟ್ಟರ್ ತಮ್ಮ ಪೋಸ್ಟ್‌ನಲ್ಲಿ, 'ಬೆಳಗಾವಿ-ಸಂಕೇಶ್ವರ-ಕೊಲ್ಲಾಪುರ-ಕರಾಡ ನಡುವೆ ರಸ್ತೆಯ ಅಗಲೀಕರಣ ಚಾಲ್ತಿಯಲ್ಲಿದ್ದು ಹಲವು ತಿರುವುಗಳು ಹಾಗೂ ಸಂಪೂರ್ಣವಾಗಿ ತಗ್ಗು-ದಿನ್ನೆಗಳಿಂದ ಕೂಡಿದ್ದು ವಾಹನ ಸವಾರರಿಗೆ ತುಂಬಾ ತೊಂದರೆಯಾಗಿ ತಲುಪಬೇಕಾದ ಸ್ಥಳಕ್ಕೆ ನಿಗದಿತ ಸಮಯಕ್ಕಿಂತಲೂ ಎರಡು ಪಟ್ಟು ಹೆಚ್ಚು ಸಮಯ ವ್ಯಯವಾಗುತ್ತಿರುವುದಷ್ಟೇ ಅಲ್ಲದೇ ವಾಹನಗಳು ಸಹ ಕೆಟ್ಟು ಹೋಗುತ್ತಿವೆ. ಹತ್ತಿರದ ಟೋಲ್ ಪ್ಲಾಜಾದಲ್ಲಿ ಪಾವತಿಸಬೇಕಾದ ಶುಲ್ಕಕ್ಕೆ ವಾಹನ ಸವಾರರಿಂದ ವಿರೋಧ ವ್ಯಕ್ತವಾಗುತ್ತಿದೆ' ಎಂದು ತಿಳಿಸಿದ್ದಾರೆ.
'ಇದೇ ಪರಿಸ್ಥಿತಿಯು ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಖಾನಾಪುರ ಹತ್ತಿರ ನಿರ್ಮಾಣವಾಗುತ್ತಿರುವ ರಸ್ತೆಗೆ ಗಣಬೈಲ್ ಟೋಲ್ ಪ್ಲಾಜಾದಲ್ಲಿ ಪಾವತಿಸಬೇಕಾದ ವಾಹನ ಶುಲ್ಕಕ್ಕೆ ಸವಾರರು ಬೇಸರಗೊಂಡಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿದ್ದು, ಈ ಹೆದ್ದಾರಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಯಾವುದೇ ಟೋಲ್ ಪ್ಲಾಜಾದಲ್ಲಿ ಟೋಲ್ ಪಡೆಯಬಾರದೆಂದು' ಶೆಟ್ಟರ್ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಣೇಬೈಲ್ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಈ ರಸ್ತೆ ಪೂರ್ಣಗೊಳ್ಳುವ ತನಕ ಟೋಲ್ ಸಂಗ್ರಹ ಮಾಡಬಾರದು ಎಂದು ಜನರು ಒತ್ತಾಯಿಸುತ್ತಿದ್ದರು. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕೆಟ್ಟು ಹೋಗಿರುವ ರಸ್ತೆಗೆ ಟೋಲ್ ಶುಲ್ಕ ಏಕೆ ಪಾವತಿಸಬೇಕು? ಎಂದು ಜನರು ಪ್ರಶ್ನಿಸಿದ್ದರು. ಆದ್ದರಿಂದ ಈ ಕುರಿತು ಸಹ ಸಂಸದರು ಸಚಿವರಿಗೆ ಪತ್ರವನ್ನು ಬರೆದಿದ್ದಾರೆ.
ಕೆಲವು ದಿನಗಳ ಹಿಂದೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಯವರ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ ರಾಜ್ಯ ಮಟ್ಟದ ಸಮಿತಿಯ ಸದಸ್ಯ ಮಹೇಂದ್ರ ಸಿಂಘಿ ಸಹ ಈ ರಸ್ತೆ ಕುರಿತು ಮಾತನಾಡಿದ್ದರು. ಕೂಡಲೇ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು. ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ನಿಧಾನ ಗತಿಯಲ್ಲಿ ಸಾಗುತ್ತಿದೆ. ಟೋಲ್ ಪಾವತಿಸಿದರೂ, ವಾಹನ ಸವಾರರಿಗೆ ಯಾತನಾಮಯ ಅನುಭವವಾಗುತ್ತಿದೆ. ಟೋಲ್ ಪಾವತಿಸುವ ವಾಹನ ಸವಾರರ ಸಂಕಷ್ಟಗಳನ್ನು ತಗ್ಗಿಸಲು ತಕ್ಷಣ ಕ್ರಮಕೈಗೊಳ್ಳಬೇಕೆಂದು ಎಂದು ಒತ್ತಾಯಿಸಲಾಗಿತ್ತು.












Click it and Unblock the Notifications