ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕೊರಳಲ್ಲಿ ಹುಲಿ ಉಗುರು ಹೋಲುವ ಪೆಂಡೆಂಟ್, ಫೋಟೋ ವೈರಲ್
ಬೆಳಗಾವಿ, ಅಕ್ಟೋಬರ್, 26: ಸದ್ಯ ರಾಜ್ಯದಲ್ಲಿ ಹುಲಿ ಉಗುರು ವಿವಾದ ಜೋರಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೂ ಸದ್ದು ಮಾಡುತ್ತಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹೆಬ್ಬಾಳ್ಕರ್ ಅವರ ಕೊರಳಲ್ಲಿ ಹುಲಿ ಉಗುರು ಹೋಲುವ ಲಾಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಫೇಸ್‌ಬುಕ್ ಖಾತೆಯಲ್ಲಿ ಹಾಕಿಕೊಂಡ ಪೋಟೋದಲ್ಲಿ ಮಗನ ಕೊರಳಲ್ಲಿ ಹುಲಿ ಉಗುರು ಹೋಲುವ ಲಾಕೇಟ್ ಇದ್ದು, ಈ ಕುರಿತು ಅವರೇ ಸ್ಪಷ್ಟೀಕರಣ ನೀಡಬೇಕಿದೆ ಎನ್ನುವ ಕೂಗುಗಳು ಎದ್ದಿವೆ.

ಹೆಬ್ಬಾಳಕರ್ ಅಳಿಯನ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್
ಹುಲಿ ಉಗುರು ಡಾಲ್ ಧರಿಸಿದ ಪ್ರಕರಣದಲ್ಲಿ ಕನ್ನಡ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ 10 ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಬಂಧನ ಬಳಿಕ, ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಹುಲಿ ಉಗುರು ಪ್ರಕರಣ ಇದೀಗ ಕಾಂಗ್ರೆಸ್ ಕೊರಳಿಗೆ ಕೈಹಾಕಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ಹುಬ್ಬಳ್ಳಿ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಕೊರಳಲ್ಲೂ ಹುಲಿ ಉಗುರು ಪೆಂಡೆಂಟ್ ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂತೋಷ್ ಬಂಧನವಾಯ್ತು, ಇವರ ಬಂಧನ ಯಾವಾಗ? ಕಾನೂನು ಎಲ್ಲರಿಗೂ ಒಂದೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಪ್ರಕರಣದಿಂದ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ವರ್ತೂರು ಸಂತೋಷ್ ಬಂಧನದ ಹಿಂದೆ ಷಡ್ಯಂತ್ರ ನಡೆದಿದೆ ಎನ್ನುವ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಮದುವೆ ಸಮಯದಲ್ಲಿ ಫೋಟೋ ಶೂಟ್‌ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಪೋಟೋ ಈಗ ವೈರಲ್ ಆಗಿದೆ. ಇದವರು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸಹೋದರಿ ಮಗಳನ್ನು ಮದುವೆಯಾಗಿದ್ದಾರೆ.
ಆದ್ದರಿಂದ ರಜತ್ ಅವರು ರಾಜಕೀಯ ವಲಯದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಅಳಿಯ ಅಂತಲೇ ಫೇಮಸ್. ಈ ಹಿಂದೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆಗಿದ್ದರು. ಇದೀಗ ಹುಲಿ ಉಗುರು ಪೆಂಡೆಂಟ್ ಧರಿಸಿರುವ ವಿಚಾರಕ್ಕೆ ಪೇಚಿಗೆ ಸಿಲುಕಿಕೊಂಡಿದ್ದಾರೆ. ಪೆಂಡೆಂಟ್ ಧರಿಸಿದ ವಿಚಾರಕ್ಕೆ ಜಗ್ಗೇಶ್, ನಟ ದರ್ಶನ ಮನೆಮೇಲೆ ದಾಳಿ ಮಾಡಿರುವ ಅರಣ್ಯ ಇಲಾಖೆ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮನೆ ಮೇಲೂ ದಾಳಿ ಮಾಡುತ್ತಾ? ಎನ್ನುವ ಪ್ರಶ್ನೆಗಳು ಎದ್ದಿವೆ.












Click it and Unblock the Notifications