ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ- ಸಿಎಂ ಸಿದ್ದರಾಮಯ್ಯ ವಾರ್ನಿಂಗ್
ಬೆಳಗಾವಿ, ಅಕ್ಟೋಬರ್ 03: ನಮ್ಮ ಸರ್ಕಾರ ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಕರಣಗಳನ್ನು ನಿಯಂತ್ರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಕೋಮು ಗಲಭೆ ಹೆಚ್ಚಾಗಿದೆ ಎನ್ನುವ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಆರೋಪ ಮಾಡುವುದೇ ಕೆಲಸವಾಗಿದೆ. ಆರೋಪ ಮಾಡುವುದೆಲ್ಲಾ ಸತ್ಯವಲ್ಲ.ಶಿವಮೊಗ್ಗದ ಪ್ರಕರಣದಲ್ಲಿ ಕಲ್ಲು ಹೊಡೆದ ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕುರುಬ ಸಮಾಜ ಸಮಾವೇಶದ ಸಂದರ್ಭದಲ್ಲಿ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಎಲ್ಲರನ್ನೂ ಒಳಗೊಂಡಂತಹ ಆಡಳಿತದ ನೀತಿ ನಮ್ಮ ಸರ್ಕಾರ ಹೊಂದಿದೆ ಎಂದರು.
ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಉಪ ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ಕುರಿತು ಮಾತನಾಡಿದ ಅವರು, ಒಕ್ಕಲಿಗರ ಹೋರಾಟ ಸಮಿತಿ ನೀಡಿದ ಪತ್ರವನ್ನು ಆಧರಿಸಿ, ಉಪ ಮುಖ್ಯಮಂತ್ರಿಗಳು ನನಗೆ ಪತ್ರ ಬರೆದಿದ್ದಾರೆ. ಇಂದಷ್ಟೇ ಆ ಪತ್ರ ನೋಡಿದ್ದೇನೆ ಎಂದು ತಿಳಿಸಿದರು.

ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಷದಲ್ಲಿ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯ ನೆಹರೂ ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ 9ನೇ ರಾಷ್ಟ್ರೀಯ ಸಮಾವೇಷದಲ್ಲಿ ಭಾಗಿಯಾದರು. ಈ ಈ ವೇಳೆ ಕಾಗಿನೆಲೆ ಕನಕ ಗುರು ಪೀಠದ ಶ್ರೀ ಶ್ರೀ ನಿರಂಜನಾನಂದ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸೊದ್ದರಾಮಾನಂದ ಸ್ವಾಮೀಜಿ ಹಾಗೂ ಅರ್ಜುನಾಭಾಯಿಪುರಿ ಸ್ವಾಮೀಜಿ ಉಪಸ್ಥಿತರಿದ್ದರು. ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಮಾವೇಷ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿಯ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ, ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗೋವಾ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕಾವಲೇಕರ್, ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವ ಮಹದೇವ್ ಜನಕಾರ್, ದತ್ತಾತ್ರೇಯ ಭರ್ನೆ, ರಾಮ ಶಂಕರ್ ಶಿಂದೆ, ಶೆಫರ್ಡ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷ ಹೆಚ್.ಎಂ.ರೇವಣ್ಣ, ಆಂಧ್ರ. ಪ್ರದೇಶ ರಾಜ್ಯದ ಸಚಿವೆ ಕೆ.ವಿ.ಉಷಾಶ್ರೀ ಚರಣ್, ಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರ ಮೊಮ್ಮಗ ಭೂಷಣ್ ರಾಜೆ ಹೋಳ್ಕರ್, ಗುಜರಾತ್ ರಾಜ್ಯದ ಮುಖಂಡರಾದ ಸಾಗರ್ ರಾಯ್ಕ ಸೇರಿ 60 ಕ್ಕೂ ಹೆಚ್ಚು ಮಂದಿ ನಾನಾ ರಾಜ್ಯಗಳ ಕುರುಬ ಮತ್ತು ಗೋಪಾಲಕ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.












Click it and Unblock the Notifications