ಸ್ಟೇಟಸ್, ಬ್ಯಾನರ್ ಮೂಲಕ ಟಿಪ್ಪು ಸೇರಿದಂತೆ ಮುಸ್ಲಿಂ ರಾಜರಿಗೆ ಅವಮಾನ: ಚಿಕ್ಕೋಡಿಯಲ್ಲಿ ಆಕ್ರೋಶ..!
ಚಿಕ್ಕೋಡಿ ನವೆಂಬರ್ 11: ಎಲ್ಲೆಡೆ ದೀಪಾವಳಿ ಹಬ್ಬದ ಆಚರಣೆ ಆರಂಭವಾಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಾತ್ರೋರಾತ್ರಿ ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕ ಮುಸ್ಲಿಂ ರಾಜರನ್ನು ಅವಮಾನಿಸುವ ರೀತಿ ವಾಟ್ಸಾಪ್ ಸ್ಟೇಟಸ್ ಹಾಗೂ ಬ್ಯಾನರ್ ಅಳವಡಿಕೆ ಮಾಡಿರುವುದು ಕಂಡು ಬಂದಿದೆ. ಇದರಿಂದಾಗಿ ಚಿಕ್ಕೋಡಿ ಬೂದಿಮುಚ್ಚಿದ ಕೆಂಡದಂತಿದೆ.
ಇದರಿಂದಾಗಿ ಚಿಕ್ಕೋಡಿ ತಾಲೂಕಿನಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಜಾಗ್ರತೆ ದೃಷ್ಟಿಯಿಂದ ಎಲ್ಲೆಡೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ ಕೆಲವರು ಟಿಪ್ಪು ಸುಲ್ತಾನ್ ಸೇರಿದಂತೆ ಮುಸ್ಲಿಂ ರಾಜರನ್ನು ಅವಮಾನಿಸುವ ರೀತಿ ವಾಟ್ಸಾಪ್ ಸ್ಟೇಟಸ್ ಇಟ್ಟಿದ್ದರು. ಇದರೊಂದಿಗೆ ಬ್ಯಾನರ್ ಕೂಡ ಹಾಕಿದ್ದರು.

ಈ ಘಟನೆ ಆಕ್ರೋಶಕ್ಕೆ ಗುರಿಯಾಗಿದೆ. ಹಬ್ಬದ ಸಮಯದಲ್ಲಿ ಕಿಡಿಗೇಡಿಗಳು ಸಮಾಜದ ಶಾಂತಿಗೆ ಭಂಗ ತರುವಂತಹ ಕೆಲಸ ಮಾಡಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಇಡೀ ಪ್ರದೇಶ ಸದ್ಯ ಖಾಕಿ ಕಣ್ಗಾವಲಿನಲ್ಲಿದೆ. ಹೀಗೆ ವಾಟ್ಸಪ್ ಸ್ಟೇಟಸ್ ಇಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜನರ ಗುಂಪೊಂದು ಜಮಾಯಿಸಿದ್ದರು.
ಇದೇ ಸಮಯದಲ್ಲಿ ಅಖಂಡ ಭಾರತ ಹೆಸರಿನಡಿ ಭೂಪಟದ ಬ್ಯಾನರ್ ಅಳವಡಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. 'ಅಖಂಡ ಭಾರತ್ ಸಪ್ಮಾ ಹೈ ಆಫ್ಘಾನಿಸ್ತಾನ್ ತಕ್ ಅಪ್ನಾ ಹೈ' ಅಖಂಡ ಭಾರತ ಹೆಸರಿನ ಬ್ಯಾನರ್ ಗೆ ಕೆಲವರು ಆಕ್ರೋಶ ಹೊರ ಹಾಕಿದರು. ಇದರಿಂದಾಗಿ ಸ್ಥಳಕ್ಕೆ ಡಿವೈಎಸ್ಪಿ ಸಿ.ಬಿ ಗೌಡರ, ಸಿಪಿಐ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಇದರಿಂದ ತನಿಖೆ ತೀವ್ರಗೊಳಿಸಿದ ಪೊಲೀಸರು ವಾಟ್ಸಪ್ ಕಿಡಿಗೇಡಿಯನ್ನು ಬಂಧಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಚಿಕ್ಕೋಡಿಯ ಹೊಸಪೇಟೆ ಗಲ್ಲಿಯಲ್ಲಿ 50 ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ನೀಡಲಾಗಿದೆ. ಅಖಂಡ ಭಾರತ ಹೆಸರಿನಡಿ ಭೂಪಟದ ಬ್ಯಾನರ್ ಅಳವಡಿಸಿದ ಸ್ಥಳದಲ್ಲೂ ಭದ್ರತೆ ನೀಡಲಾಗಿದೆ.
ಅಂದಹಾಗೆ ದೀಪಾವಳಿ ನಿಮಿತ್ಯ ನಿರ್ಮಿಸುವ ಕೋಟೆ ಮಾದರಿ ಬಳಿ ಗಡಿ ಭಾಗದಲ್ಲಿ ಈ ಬ್ಯಾನರ್ ಅನ್ನು ಹಾಕಲಾಗಿತ್ತು. ಬ್ಯಾನರ್ ಅಳವಡಿಸಿರುವ ಸ್ಥಳದಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದಂತೆ ಪೊಲೀಸರಿಂದ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಘಟನೆ ಕುರಿತಂತೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ವಶಕ್ಕೆ ಪಡೆದ ವ್ಯಕ್ತ ವಿಚಾರಣೆಯನ್ನು ಮಾಡಲಾಗುತ್ತಿದೆ.












Click it and Unblock the Notifications