ನೇತಾಜಿ ಜನ್ಮಭೂಮಿಯ ಮಣ್ಣಿಗೆ ನಮೋ ಎಂದ ಸಿದ್ದರಾಮಯ್ಯ
ಬೆಳಗಾವಿ, ಜು. 01 : ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ಭೂಮಿಯ ಪವಿತ್ರ ಮಣ್ಣನ್ನು ಹೊತ್ತು ತಂದ ಉತ್ಕಲ ಬಿಕಾಸ ಜುಬಾ ಪರಿಷದ್‍ನ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಸ್ವಾಗತಿಸಿದರು. ನೇತಾಜಿ ಜನ್ಮಭೂಮಿಯ ಮಣ್ಣಿಗೆ ಪುಷ್ಪ ನಮನ ಸಲ್ಲಿಸಿ, ಗೌರವ ಸಲ್ಲಿಸಿದರು.
ನೇತಾಜಿ ಅವರ ಕಾರ್ಯಚಟುವಟಿಕೆ ಮತ್ತು ಚಿಂತನೆಗಳನ್ನು ಯುವ ಪೀಳಿಗೆಗೆ ಸಾರಲು ದೇಬಿ ಪ್ರಸಾದ್ ಪೃಷ್ಠಿ ನೇತೃತ್ವದ ಏಳು ಜನರ ತಂಡ 'ನೇತಾಜಿ ಕಾ ಜನ್ಮ ಭೂಮಿ ಕಾ ಮಟ್ಟಿ, ಯುದ್ಧ ಭೂಮಿ ತಕ್ ಯಾತ್ರಾ' ಎಂಬ ಅಭಿಯಾನವನ್ನು ಆರಂಭಿಸಿದೆ.

ಒಡಿಶಾದ ಕಟಕ್‍ನ ಒಡಿಯಾ ಬಜಾರ್‌ನಲ್ಲಿರುವ ಸುಭಾಷ್ ಚಂದ್ರ ಬೋಸ್ ಅವರ ಜನ್ಮಭೂಮಿಯ ಪವಿತ್ರ ಮಣ್ಣನ್ನು ಮಣಿಪುರದ ಇಂಫಾಲ್‍ನಲ್ಲಿರುವ ನೇತಾಜಿ ಅವರ ಯುದ್ಧ ಭೂಮಿಯವರೆಗೆ ತೆಗೆದುಕೊಂಡು ಹೋಗುವ ಯಾತ್ರೆ ಇದಾಗಿದ್ದು, ಜನವರಿ 16ರಂದು ಯಾತ್ರೆಗೆ ಚಾಲನೆ ನೀಡಲಾಗಿದೆ. [ನೇತಾಜಿ ಕುಟುಂಬ ಕಥೆ ;ಹೆಗಡೆ ಸುಳ್ಳಿನ ಕಂತೆ]
ಈ ಯಾತ್ರೆಯು ತನ್ನ ಐದನೇ ಹಂತದ ಅಂತಿಮ ಘಟ್ಟದಲ್ಲಿ ಕರ್ನಾಟಕವನ್ನು ತಲುಪಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾತ್ರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ತಂಡ ಸದಸ್ಯರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. [ನೇತಾಜಿ ಕುಟುಂಬ ಆಸ್ಟ್ರಿಯಾದಲ್ಲಿ ವಾಸ]
ನೇತಾಜಿ ಅವರ ಜನ್ಮ ಭೂಮಿಯ ಮಣ್ಣಿಗೆ ನಮಿಸಿದ ಸಿದ್ದರಾಮಯ್ಯ ಅವರು, ತಂಡದ ಸದಸ್ಯರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ರಜತ ಸ್ಮರಣಿಕೆ ಹಾಗೂ ಬೆಳಗಾವಿಯ ತಿನಿಸು ಕುಂದಾ ತಿನಿಸು ನೀಡಿದರು.

ದೇಬಿ ಪ್ರಸಾದ್ ಪೃಷ್ಠಿ ಅವರು ನೇತಾಜಿ ಅವರೊಂದಿಗೆ ಪಂಡಿತ್ ಜವಾಹರಲಾಲ್ ನೆಹರೂ ಅವರೊನ್ನೊಳಗೊಂಡಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿರುವ ಸಂಗ್ರಹ ಯೋಗ್ಯ ಭಾವಚಿತ್ರವನ್ನು ಸಿದ್ದರಾಮಯ್ಯ ಅವರಿಗೆ ಕೊಡುಗೆಯಾಗಿ ನೀಡಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಇ.ವಿ.ರಮಣ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಿ. ಜಿ. ನಂದ ಕುಮಾರ್, ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications