ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಯಾಗಲಿದೆ ರಾಜ್ಯದ ಈ ಪ್ರಸಿದ್ಧ ದೇವಾಲಯ
ಬೆಳಗಾವಿ, ಫೆಬ್ರವರಿ 13: ಧರ್ಮಸ್ಥಳ ಮತ್ತು ತಿರುಪತಿ ಮಾದರಿಯಲ್ಲಿ ಗಡಿನಾಡಿನ ಪ್ರಸಿದ್ಧ ದೇವಾಲಯ ಅಭಿವೃದ್ಧಿಯಾಗಲಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ದೇವಾಲಯಕ್ಕೆ ರೈಲು ಸಂಪರ್ಕ ಕಲ್ಪಿಸಲು ಸಂಸದರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಭರತ ಹುಣ್ಣಿಮೆಯಂದು ದೇವಾಲಯಕ್ಕೆ 10 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

"ಮುಂದಿನ ವರ್ಷದಲ್ಲಿ ದಾಸೋಹ ಭವನ ಮಾಡಬೇಕು ಎಂದು ಯೋಜನೆ ರೂಪಿಸಲಾಗಿದೆ. ತಿರುಪತಿ, ಧರ್ಮಸ್ಥಳದ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅನುದಾನ ಲಭ್ಯವಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
10 ಲಕ್ಷ ಭಕ್ತರ ಭೇಟಿ ನಿರೀಕ್ಷೆ: ಸವದತ್ತಿಯ ಶ್ರೀ ಕ್ಷೇತ್ರ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆಗೆ ಭರತ ಹುಣ್ಣಿಮೆ ನಿಮಿತ್ಯ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಮೊದಲ ಬಾರಿಗೆ ಮಂಡಳಿ ಹಾಗೂ ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳಿಗಾಗಿ ಮಜ್ಜಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.
ಒಂದೇ ದಿನದಲ್ಲಿ ಸರಿಸುಮಾರು 10 ಲಕ್ಷ ಜನರು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುವ ನಿರೀಕ್ಷೆ ಇದೆ. ಭಕ್ತಾದಿಗಳಿಗೆ ತೊಂದರೆಯಾಗದಂತೆ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ರಸ್ತೆಗಳನ್ನು ಮಾರ್ಪಡಿಸಿ, ಟ್ರಾಫಿಕ್ ನಿಯಂತ್ರಣ ಮಾಡಲಾಗುತ್ತಿದೆ.
ಚಕ್ಕಡಿಗಾಡಿ, ಜೀಪ್, ಟೆಂಪೋ, ಟ್ರ್ಯಾಕ್ಟರ್, ಬೈಕ್, ಕಾರ್, ಬಸ್ ಸೇರಿದಂತೆ ಎಲ್ಲ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸರಿಸುಮಾರು 1,500 ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು, ಪ್ರವಾಸೋದ್ಯಮ ಮಂಡಳಿ ಅಧ್ಯಕರು, ಈ ಭಾಗದ ಶಾಸಕರ ಸಲಹೆಯಂತೆ ವಿವಿಧ ಭಾಗಗಳಿಂದ ಆಗಮಿಸುವ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದನಕರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಪಾರ್ಕಿಂಗ್ ಮತ್ತು ಟ್ರಾಫಿಕ್ ಮೂಲ ಸಮಸ್ಯೆಯಾಗಿತ್ತು. ಚಕ್ಕಡಿ ಗಾಡಿ ಹಾಗೂ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
"ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಮಂಡಳಿಯಿಂದ ಅನೇಕ ಯೋಜನೆ ಸಿದ್ಧಗೊಳ್ಳುತ್ತಿದೆ. ಜೋಗುಳಬಾವಿ, ಉಗರಗೋಳ ಹಾಗೂ ಸವದತ್ತಿ ರಸ್ತೆಯಿಂದ ಬರುವ ವಾಹನಗಳಿಗೆ ನೇರವಾಗಿ ಪಾರ್ಕಿಂಗ್ ಹೋಗಲು ರಸ್ತೆಗಳನ್ನು ಗುರುತಿಸಲಾಗಿದೆ. ಇದರಿಂದ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯವಾಗುತ್ತಿದೆ" ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ಮುಖ್ಯವಾಗಿ ಪಾರ್ಕಿಂಗ್, ಲೈಟಿಂಗ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಾಲಯದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರು ವಾಹನಗಳನ್ನು ಪಾರ್ಕ್ ಮಾಡಿದಾಗ ಟ್ರಾಫಿಕ್ ಸಮಸ್ಯೆಯಾಗುತ್ತಿದೆ ಅದಕ್ಕೆ 15 ಟೊಯಿಂಗ್ ವಾಹನಗಳ ಮೂಲಕ ಪಾರ್ಕ್ ಮಾಡಿದ ವಾಹನಗಳನ್ನು ಸ್ಥಳಾಂತರಿಸಲಾಗುತ್ತಿದೆ.
ದೇವಾಲಯದ ಬದಿಯ ರಸ್ತೆಗಳಲ್ಲಿ ಕೂಡ ಯಾವುದೇ ವಾಹನಗಳ ಪಾರ್ಕಿಂಗ್ ಅವಕಾಶ ಕೊಟ್ಟಿಲ್ಲ. ರಸ್ತೆಗಳ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ದೇವಸ್ಥಾನದ ಸುತ್ತ ಮುತ್ತ ಒಳ್ಳೆಯ ಸ್ವಚ್ಛ ವಾತಾವರಣ ನಿರ್ಮಾಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications