ರಾಮದುರ್ಗ: ಬಿಜೆಪಿಯಲ್ಲಿನ ಅಸಮಾಧಾನದಿಂದ ಕಾಂಗ್ರೆಸ್‌ಗೆ ಲಾಭವಾಗುವುದೇ? ಇಲ್ಲಿದೆ ಗ್ರೌಂಡ್ ರಿಪೋರ್ಟ್
ರಾಮದುರ್ಗ, ಮೇ 03: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳ ಪೈಕಿ ರಾಮದುರ್ಗವೂ ಒಂದು. 2018 ರಲ್ಲಿ, ಈ ಕ್ಷೇತ್ರವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆದ್ದುಕೊಂಡಿತು. ಬಿಜೆಪಿಯ ಮಹಾದೇವಪ್ಪ ಯಾದವಾಡ ಅವರು ಕಾಂಗ್ರೆಸ್‌ನ ಅಶೋಕ್ ಪಟ್ಟಣರನ್ನು 2875 ಮತಗಳ ಅಂತರದಿಂದ ಸೋಲಿಸುವ ಮೂಲಕ ಗೆಲುವು ಸಾಧಿಸಿದರು. ಆದರೆ, ಈಗ ಯಾದವಾಡ ಅವರಿಗೆ ಟಿಕೆಟ್ ಕೈತಪ್ಪಿದ್ದು, ಕ್ಷೇತ್ರದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ರಾಮದುರ್ಗ ವಿಧಾನಸಭಾ ಕ್ಷೇತ್ರವು ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾ ಮತದಾರರು ಸೇರಿ ಒಟ್ಟು 1,97,637 ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 1,00,607 ಪುರುಷರು, 96,601 ಮಹಿಳೆಯರು ಮತ್ತು 12 ಇತರರಿದ್ದಾರೆ.

ಕಾಂಗ್ರೆಸ್- ಬಿಜೆಪಿ ನಡುವೆ ಪೈಪೋಟಿ
2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಮದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕ ರೇವಣ್ಣ ಕಣದಲ್ಲಿದ್ದಾರೆ. ರಾಮದುರ್ಗ ಕ್ಷೇತ್ರದ ಹಾಲಿ ಶಾಸಕರಾದ ಮಹದೇವಪ್ಪ ಯಾದವಾಡ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಕೋಲಾಹಲ ಎದ್ದಿತ್ತು. ಆದರೆ, ಅವರ ಅಸಮಾಧಾನವನ್ನು ಶಮನಗೊಳಿಸಿದ್ದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ.
ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಯಾದವಾಡ ಅವರ ಅಸಮಾಧಾನ ಇನ್ನೂ ಶಮನವಾಗಿಲ್ಲವೆಂದು ಸ್ಥಳೀಯ ಜನರು ಅಭಿಪ್ರಾಯ ಪಟ್ಟಿದ್ದಾರೆ. ಮಹದೇವಪ್ಪ ಯಾದವಾಡ ಅವರ ಸಹೋದರ ಮಲ್ಲಪ್ಪ ಯಾದವಾಡ ಅವರೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಬ್ಬರಿಗೂ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಇದು ಕಾಂಗ್ರೆಸ್‌ಗೆ ಲಾಭ ತಂದುಕೊಡಬಹುದು ಎಂದು ಹೇಳಲಾಗುತ್ತಿದೆ.
ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಅಶೋಕ್ ಪಟ್ಟಣ ಅವರು ಕ್ಷೇತ್ರಕ್ಕೆ ಹಳಬರು. ಎರಡು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ತಂದೆ ಈ ಹಿಂದೆ ಜನಸಂಘದಿಂದ ಒಂದು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪಟ್ಟಣ ಅವರ ತಾಯಿ ಒಂದು ಬಾರಿ ಕಾಂಗ್ರೆಸ್ ಶಾಸಕರಾಗಿದ್ದರು. ಆ ನಂತರ ಅಶೋಕ ಪಟ್ಟಣ ಅವರು ಎರಡು ಬಾರಿ ಶಾಸಕರಾಗಿದ್ದಾರೆ.
ಬಿಜೆಪಿ ಟಿಕೆಟ್ ಪಡೆದಿರುವ ಚಿಕ್ಕರೇವಣ್ಣ ಅವರು ಬೆಂಗಳೂರಿನಲ್ಲಿ ಗ್ರಾನೈಟ್ ಉದ್ಯಮಿ. ಅವರು ಕ್ಷೇತ್ರಕ್ಕೆ ಹೊಸಬರು. ಆದರೆ, ಕೋವಿಡ್ ಕಾಲದಲ್ಲಿ ಕ್ಷೇತ್ರದ ಜನರಿಗೆ ಸಹಾಯ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ, ರಾಮದುರ್ಗ ಕ್ಷೇತ್ರದ ಜನರು ಹೊಸಬರಿಗೆ ಮಣೆ ಹಾಕುವುದು ಅಪರೂಪ ಎಂಬ ಮಾತುಗಳು ಕೇಳಿಬಂದಿವೆ.
ಅಶೋಕ್ ಪಟ್ಟಣ ಅವರು ಎರಡು ಅವಧಿಗಳಲ್ಲಿ ಶಾಸಕರಾಗಿ ಮಾಡಿದ ಅಭಿವೃದ್ದಿಗಳ ಬಗ್ಗೆ ಪ್ರಚಾರ ಮಾಡುತ್ತ ಮತ ಕೇಳುತ್ತಿದ್ದಾರೆ. ಮಲಪ್ರಭಾ ನದಿ ಪಾತ್ರದ ಕಾಲುವೆಗಳ ಅಗಲೀಕರಣ ಹಾಗೂ ರಸ್ತೆ ನಿರ್ಮಾಣದಂತಹ ಅಭಿವೃದ್ದಿಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮದುರ್ಗದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲವೆಂದು ಸ್ಥಳೀಯರು ಹೇಳಿದ್ದಾರೆ.












Click it and Unblock the Notifications