ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ, ಎಲ್ಲಿಯ ವರೆಗೆ ಇರಲಿದೆ, ನಿಷೇಧಾಜ್ಞೆಗೆ ಕಾರಣವೇನು ?
ಕರ್ನಾಟಕದ ಚಳಿಗಾಲದ ಅಧಿವೇಶನವು ನಾಳೆಯಿಂದ (ಡಿಸೆಂಬರ್ 9ರಿಂದ) ನಡೆಯಲಿದೆ. ಚಳಿಗಾಲದ ಅಧಿವೇಶನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಈ ನಡುವೆ ನಾಡದ್ರೋಹಿ ಎಂಇಎಸ್ ಪುಂಡರು ಬಾಲ ಬಿಚ್ಚಿದ್ದು, ಪೊಲೀಸರು ಅಲರ್ಟ್ ಆಗಿದ್ದಾರೆ.
ಬೆಳಗಾವಿಯಲ್ಲಿ ಪ್ರತಿ ಬಾರಿ ಅಧಿವೇಶನ ನಡೆಯುವಾಗಲೂ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಕ್ಯಾತೆ ತೆಗೆಯುತ್ತದೆ. ಇದೀಗ ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇದೀಗ ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಾಡದ್ರೋಹಿ ಎಂಇಎಸ್ ಪುಂಡರಿಗೆ ಶಾಕ್ ನೀಡುವುದಕ್ಕೆ ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.

ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಒಂದು ದಿನ ಮುಂಚೆಯೇ ಬೆಳಗಾವಿಯಲ್ಲಿ ಮಹಾಮೇಳಾವ್ ನಡೆಸಲು ಎಂಇಎಸ್ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಗೊಂದಲಗಳು ಸೃಷ್ಟಿಯಾಗುವುದನ್ನು ತಡೆಯುವ ಉದ್ದೇಶದಿಂದ ಹಾಗೂ ಮಹಾಮೇಳಾವಕ್ಕೆ ಬ್ರೇಕ್ ಹಾಕಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಈ ಸಂಬಂಧ ಬೆಳಗಾವಿ ನಗರ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಅವರು ಈ ಭಾಗದಲ್ಲಿ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಇಲ್ಲಿ ಡಿಸೆಂಬರ್ 9 ರಿಂದ 20 ವರೆಗೆ ಅಂದರೆ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದೆ.
ನಾಳೆ (ಸೋಮಚಾರ) ಬೆಳಗ್ಗೆ 6 ಗಂಟೆಯಿಂದ 20ನೇ ತಾರೀಕಿನ ಮಧ್ಯರಾತ್ರಿ 12 ಗಂಟೆ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಎನ್‌ಎಸ್‌ಎಸ್ ಕಾಯ್ದೆಯ ಕಲಂ 163 ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಅಲ್ಲದೇ ಬೆಳಗಾವಿಯ ಟಿಳಕವಾಡಿ, ಕ್ಯಾಂಪ್, ಶಹಾಪೂರ, ಮಾರ್ಕೆಟ್ ಠಾಣೆ ವ್ಯಾಪ್ತಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಇನ್ನು ವ್ಯಾಕ್ಸಿನ್ ಡಿಪೋ ಲೇಲೆ ಮೈದಾನ, ಧರ್ಮವೀರ ಸಂಭಾಜಿ ವೃತ್ತ, ಸಂಭಾಜಿ ಉದ್ಯಾನ ಹಾಗೂ ಶಿವಾಜಿ ಉದ್ಯಾನ ಭಾಗದಲ್ಲಿ ಮಹಾಮೇಳಾವ್ ನಡೆಸದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕರ್ನಾಟಕ ಸರ್ಕಾರದ ವಿರುದ್ಧ ಮಹಾಮೇಳಾವ್ ನಡೆಸಲು ಎಂಇಎಸ್ ಪುಂಡರು ಮುಂದಾಗಿದ್ದರು. ಇದಕ್ಕೆ ಬ್ರೇಕ್ ಹಾಕಲು ಹಾಗೂ ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಕಾರಣಕ್ಕೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹೇಗಿದೆ ಬೆಳಗಾವಿ ಅಧಿವೇಶನಕ್ಕೆ ಸಿದ್ಧತೆ
ಇನ್ನು ಬೆಳಗಾವಿಯ ಅಧಿವೇಶನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸ್ಪೀಕರ್ ಯು ಟಿ ಖಾದರ್ ಅವರು ಮಾತನಾಡಿ, ಡಿ.9 ರಿಂದ 20 ನೇ ತಾರೀಕಿನ ವರೆಗೂ ಅಧಿವೇಶನ ನಡೆಯಲಿದೆ. ಬೆಳಿಗ್ಗೆ 9ರಿಂದ ಅಧಿವೇಶನ ಆರಂಭವಾಗಲಿದೆ. 10.30 ಕ್ಕೆ ಅನುಭವ ಮಂಟಪದ ಭಾವಚಿತ್ರ ಅನಾವರಣಗೊಳಿಸಲಾಗುತ್ತಿದೆ. ಅಲ್ಲದೇ ಉಪ ಚುನಾವಣೆ ಗೆದ್ದವರಿಗೆ ಪ್ರಮಾಣ ವಚನ ನಡೆಯಲಿದೆ.
ಐದು ವಿಧೇಯಕ ಮಂಡನೆ ಆಗಲಿದ್ದು, ಎರಡು ಆರ್ಡಿನ್ಸ್ ಬಂದಿದೆ. ಮೂರು ಸದಸ್ಯರು ಖಾಸಗಿ ಬಿಲ್ ಮಂಡಿಸಲಿದ್ದಾರೆ. ಇನ್ನು ಎಂದಿನಂತೆ ಅಧಿವೇಶನಕ್ಕೆ ಬರುವ ಶಾಸಕರಿಗೆ, ಅಧಿಕಾರಿಗಳು, ಸಿಬ್ಬಂದಿಗೆ ಅಗತ್ಯ ವಸತಿ, ಊಟ ಹಾಗೂ ವಾಹನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಅಧಿವೇಶನಕ್ಕಾಗಿ ಹತ್ತು ಕಮಿಟಿಗಳನ್ನು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಮಹಾತ್ಮಾ ಗಾಂಧಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆಗೆ 100 ವರ್ಷ ತುಂಬಿದ್ದು, ಇದಕ್ಕಾಗಿ ಸುವರ್ಣ ವಿಧಾನ ಸೌಧದಲ್ಲಿ ಗಾಂಧೀಜಿ ಪೋಟೋ ಪ್ರೇಮ್ ಪ್ರದರ್ಶನ ಮಾಡಲಾಗಿದೆ. ಅಧಿವೇಶನಕ್ಕೆ ಸಂಬಂಧಿಸಿದಂತೆ ಬಿಸಿನೆಸ್ ಕಮಿಟಿ ನಿರ್ಧಾರ ಮಾಡಲಿದೆ. ಇದರಲ್ಲಿ ಆಡಳಿತ, ವಿರೋಧ ಪಕ್ಷದ ನಾಯಕರು ಸೇರಿ ಚರ್ಚೆ ಮಾಡುತ್ತಾರೆ. ಅಲ್ಲದೇ ಉತ್ತರ ಕರ್ನಾಟಕ ಚರ್ಚೆ ಆಗಬೇಕು, ಇದರೊಂದಿಗೆ ಸಮಗ್ರ ಕರ್ನಾಟಕದ ಬಗ್ಗೆಯೂ ಚರ್ಚೆ ಆಗಬೇಕು. ಇನ್ನು ಇಲ್ಲಿ ಶಾಶ್ವತವಾಗಿ ಶಾಸಕರ ಭವನ ನಿರ್ಮಾಣ ಮಾಡಲು ಚಿಂತನೆ ಮಾಡ್ತಿದ್ದೇವೆ ಎಂದೂ ಖಾದರ್ ಅವರು ಹೇಳಿದ್ದಾರೆ.












Click it and Unblock the Notifications