'ದಣಿವರಿಯದ ಧೀಮಂತ' ಪ್ರಭಾಕರ ಅಣ್ಣ ಕೋರೆ
'ಕಾಯಕದಲ್ಲಿ ನಿರತನಾದಡೆ ಗುರು ದರ್ಶನವಾದಡು ಮರೆಯಬೇಕು, ಲಿಂಗಪೂಜೆಯಾದಡು ಹಂಗು ಹರಿಯಬೇಕು' ಎಂಬ ಶಿವಶರಣ ಆಯ್ದಕ್ಕಿ ಮಾರಯ್ಯನ ವಚನದ ಕಾಯಕ ತತ್ವವನ್ನು ಚಾಚೂ ತಪ್ಪದೆ ಅಳವಡಿಸಿಕೊಂಡ ನಮ್ಮ ಶ್ರೀಯುತ ಪ್ರಭಾಕರ ಕೋರೆಯವರು. ಶ್ರೀಯುತರು ತಮ್ಮ ತನು, ಮನಗಳನ್ನು ಕನ್ನಡ ನಾಡಿನ ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಕೃಷಿ, ಸಹಕಾರ, ತಂತ್ರಜ್ಞಾನ, ರಾಜಕಾರಣ ಮತ್ತು ಸಮಾಜ ಸುಧಾರಣೆಯಲ್ಲಿ ಸಲ್ಲಿಸಿದ ಸೇವೆ ಅಮೂಲಾಗ್ರವಾದುದು.
'ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ' ಶ್ರೀಯುತ ಬಸವಪ್ರಭು ಹಾಗೂ ಮಾತೆ ಶಾರದಾದೇವಿಯರ ಪವಿತ್ರ ಗರ್ಭದಲ್ಲಿ ಕ್ರಿ.ಶ 1947 ಆಗಷ್ಟ 01 ರಂದು ಬೆಳಗಾವಿ ಜಿಲ್ಲೆಯ ಅಂಕಲಿಯಲ್ಲಿ ಜನ್ಮ ತಾಳಿದ ಶ್ರೀಯುತ ಪ್ರಭಾಕರ ಕೋರೆಯವರು ಅಕ್ಷರ ಕ್ರಾಂತಿಯ ಕಿರಣವಾಗಿ, ಕೃಷಿ ಬದುಕಿನ ಕೇದಿಗೆಯ ಸುಗಂಧವಾಗಿ, ತಾಂತ್ರಿಕತೆಯ ತಂತ್ರಜ್ಞನಾಗಿ, ಸಹಕಾರದ ಸಹೋದರನಾಗಿ, ಅರೋಗ್ಯದ ಭಾಗ್ಯವಿದಾತನಾಗಿ ಬೆಳೆದು ಬಂದಿರುವುದು ಕನ್ನಡನಾಡಿನ ಹೆಮ್ಮೆಯ ಪ್ರತೀಕ.

ಹುಟ್ಟಿದವರೆಲ್ಲ ಸಾಧಕರಾಗುವುದಿಲ್ಲ, ಸಾಧಿಸುವ ಅವಕಾಶಗಳು ಸಾವಿರ ಸಲ ಒದಗಿ ಬಂದರೂ ಸರಿದ ನಿಲ್ಲುವ ಮಂದಿ ಸಾಕಷ್ಟು, ಆದರೆ ಇದಕ್ಕೆ ಪ್ರತಿರೋಧವಾಗಿ ಅವಕಾಶಗಳಿಗಾಗಿ ಹಾತೊರೆದು ಸಮಾಜದ ಭವಿಷತ್ತಿನ ಕುರಿತು 'ನ ಭೂತೋ ನ ಭವಿಷತ್' ಎಂಬ ತಾತ್ವಿಕ ನಿಲುವಿನಡಿಯಲ್ಲಿ ಕ್ರಿ ಶ 1916 ರಲ್ಲಿ ಸಪ್ತರ್ಷಿಗಳು ಸ್ಥಾಪಿಸಿದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಕನಸುಗಳನ್ನು ನನಸು ಮಾಡುವತ್ತ ದಿಟ್ಟ ಹೆಜ್ಜೆಯನ್ನಿಟ್ಟು 1984 ರಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿಗಳನ್ನು ವಹಿಸಿಕೊಂಡು ಕೇವಲ 38 ಅಂಗ ಸಂಸ್ಥೆಗಳನ್ನು ಹೊಂದಿದ್ದ ಕೆ ಎಲ್ ಇ ಸಂಸ್ಥೆಯನ್ನು 40 ವರ್ಷಗಳಲ್ಲಿ 300 ರ ಗಡಿಯನ್ನು ದಾಟಿಸುವಲ್ಲಿ ವಹಿಸಿದ ಶ್ರಮ, ಪ್ರಾಮಾಣಿಕ ಪ್ರಯತ್ನ ಪ್ರಭಾಕರ ಕೋರೆಯವರದ್ದು.
'ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು' ಎಂಬ ವೇದೋಕ್ತಿಯ ಭಾವದಂತೆ ನಾಡಿನಲ್ಲಿರುವ ಜ್ಞಾನದ ಹಸಿವನ್ನು ನೀಗಿಸುತ್ತಿರುವ ದಣಿವರಿಯದ ಧೀಮಂತ ನಾಯಕ. ಶ್ರೀಯುತರ ಕಾರ್ಯಸಮ್ಮುಖದಲ್ಲಿ ಕಾರ್ಯೋನುಖವಾದ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲಿ ಇದು ಇಲ್ಲ! ಎಂಬ ಕೊರತೆಯೇ ಇಲ್ಲ.
ಸಂಸ್ಥೆಯಲ್ಲಿ ಅಧ್ಯಯನ ಗೈಯುತ್ತಿರುವ 138000 ಸಾವಿರ ವಿದ್ಯಾರ್ಥಿಗಳನ್ನು ಕಲೆ, ಸಂಸ್ಕೃತಿ, ವಿಜ್ಞಾನ, ಕ್ರೀಡೆ, ಸಂಶೋಧನೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವನ್ನೇರಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಳಸಪ್ರಾಯವಾಗಿ ಗೋಚರಿಸುವಂತೆ ಪ್ರೋತ್ಸಾಹಿಸಿದವರು. ಸಾಧನೆಗೈದ ವಿದ್ಯಾರ್ಥಿಗಳನ್ನು, ಮಾರ್ಗದರ್ಶನ ತೋರಿದ ಸರ್ವರನ್ನೂ ಗೌರವಿಸುವ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರನ್ನು ಅತ್ಯಂತ ಪ್ರೀತಿ ಪೂರ್ವಕವಾಗಿ ಅಪ್ಪಿಕೊಳ್ಳುತ್ತಿರುವ ನಿರ್ಮಲಭಾವ ಕೋರೆಯವರದು.
'ಆರೋಗ್ಯವೇ ಭಾಗ್ಯ' ಎಂಬ ಗಾದೆಯನ್ನರಿತ ಶ್ರೀಯುತರು 70000 ಸಾವಿರ ಒಳರೋಗಿಗಳು ಹಾಗೂ 9 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸುತ್ತ 1400 ಹಾಸಿಗೆಗಳುಳ್ಳ ಬಹು ದೊಡ್ಡ ಆಸ್ಪತ್ರೆಯ ನಿರ್ಮಾತೃ.
'ಆಡು ಮುಟ್ಟದ ಸೊಪ್ಪಿಲ್ಲ ಕೋರೆಯವರು ಸಾಧಿಸದ ಕ್ಷೇತ್ರವಿಲ್ಲ' ವೆಂಬ ಸಾಧನೋಕ್ತಿಯಂತೆ ಕೋರೆಯವರು ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್ ಬೆಳಗಾವಿ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿಯ ಕುಲಪತಿಗಳಾಗಿ, 3 ಬಾರಿ ರಾಜ್ಯಸಭೆಯ ಸದಸ್ಯರಾಗಿ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ನಿಭಾಯಿಸಿದ ಜವಾಬ್ದಾರಿಗಳು ಮಹತ್ವದ್ದು. ಮಾನವ ಸಂಪನ್ಮೂಲ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ರಕ್ಷಣಾ ಸಚಿವಾಲಯ, ಶಿಕ್ಷಣ ಹಾಗೂ ರೇಲ್ವೆ ಇಲಾಖೆಗಳ ಸಂಸದೀಯ ಸಲಹಾ ಸಮಿತಿಯ ಸದಸ್ಯರಾಗಿ ನೀಡಿದ ಸಲಹೆಗಳು ಅಮೃತದಷ್ಟೆ ಮಹತ್ವವುಳ್ಳದ್ದು.
ಸಾಧನೆಯ ಶಿಖರವನ್ನೇರಿ ನಿಂತಿರುವ ಪ್ರಭಾಕರ ಕೋರೆಯವರ ವಾಙ್ಮಯದಲ್ಲಿ ತಾವು 'ಸಾಧಿಸಿದ್ದು ಕೇವಲ ಸಾಸಿವೆಯಷ್ಟು, ಸಾಧಿಸಬೇಕಾದ್ದು ಸಾಗರದಷ್ಟು' ಎಂಬ ಆಶೋತ್ತರ ಭಾವಗಳನ್ನು ಕಾಣುತ್ತೇವೆ. ಇಂತಹ ಸೃಜನಶೀಲ ವ್ಯಕ್ತಿತ್ವವುಳ್ಳ ಸನ್ಮಾನ್ಯರನ್ನರಸಿ ಬಂದ ಪ್ರಶಸ್ತಿಗಳು ಅನೇಕ. ಶ್ರೀಯುತರಿಗೆ ಕರ್ನಾಟಕ ವಿಶ್ವವಿದ್ಯಾನಿಲಯವು 2008ರಲ್ಲಿ ಗೌರವ ಡಾಕ್ಟರೇಟ್ ನೀಡಿ ತನ್ನ ಋಣದ ಭಾರವನ್ನು ಹಗುರಗೊಳಿಸಿಕೊಂಡಿತು.
ಅಮೇರಿಕದ 'ಇಂಡೋ ಅಮೇರಿಕನ್ ಪ್ರೆಸ್ ಕ್ಲಬ್' ವತಿಯಿಂದ 'ಜೀವಮಾನ ಸಾಧನೆ' ಪ್ರಶಸ್ತಿಯನ್ನು ನ್ಯೂಯಾರ್ಕ್ನಲ್ಲಿ ಪ್ರದಾನ ಮಾಡಲಾಯಿತು. ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅನೇಕ ಸಂಘ-ಸಂಸ್ಥೆಗಳು ಕೋರೆಯವರ ಸೃಜನಶೀಲತೆ ಹಾಗೂ ಕಾರ್ಯ ಪ್ರವರ್ತತೆಯನ್ನು ಮೆಚ್ಚಿ ಪ್ರಶಸ್ತಿಯನ್ನು ನೀಡಿದ್ದು ಕನ್ನಡ ನಾಡಿನ ಜನತೆ ಹೆಮ್ಮೆಯಿಂದ ಹೇಳಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.
'ತುಂಬಿದ ಕೊಡ ತುಳುಕುವುದಿಲ್ಲ' ಎಂಬ ಗಾದೆಯ ತಾತ್ಪರ್ಯದ ಭಾವದಂತೆ ಎಪ್ಪತೈದರ ಗಡಿ ದಾಟಿದರೂ ಇಪ್ಪತ್ತರ ಹರೆಯದ ಹುಮ್ಮಸ್ಸಿನ ಹುಡಗನಂತೆ ಸದಾ ಉತ್ಸಾಹ, ಉಲ್ಲಾಸ ಅವರ ಮೊಗದಲಿ. ನಾಡು ನುಡಿಯ ಭಾಷಾಭಿಮಾನವಂತೂ ಹೇಳತೀರದು. ಕನ್ನಡ ನಾಡಿನ ಗಡಿ ಭಾಗವಾದ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಸನ್ 2011 ರ ಮಾರ್ಚ್ ತಿಂಗಳಲ್ಲಿ ಆಯೋಜಿಸಿ ಭಾಷಾಭಿಮಾನ ಮೆರೆದವರು.
ಸದಾ ಇಂದಿಗೂ ಕನ್ನಡದ ಕಾರ್ಯಕ್ರಮಗಳನ್ನು ನಡೆಸುತ್ತಾ ಕನ್ನಡ ಡಿಂಡಿಮ ಮೊಳಗಿಸಿದವರು. 'ಜಗವೆಲ್ಲ ನಗುತಿರಲಿ ಜಗದಳವು ನನಗಿರಲಿ' ಕವಿ ಈಶ್ವರ ಸಣಕಲ್ಲ ಕಾವ್ಯದ ಸ್ವಾರಸ್ಯತೆಯನ್ನು ಮೈಗೂಡಿಸಿಕೊಂಡು ಒಡಲೊಳಗಿನ ಕಿಚ್ಚಿಗೆ ಬೆಂದು ಬೆವರುತ್ತಿದ್ದರೂ, 'ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರು ಕುಗ್ಗದೆ ಸಮಾಧಾನಿಯಾಗಿರಬೇಕೆಂಬ' ಅಕ್ಕನ ವಚನೋಪದೇಶದಂತೆ, ಟೀಕೆ-ಟಿಪ್ಪಣಿಗಳಿಗೆ ತಲೆಬಾಗದೆ 'ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ' ಎನ್ನುತ್ತಾ ಒಡಲೊಳಗಿನ ವಿದ್ಯೆ ಒಡಗೂಡುತ್ತಾ ಜಾತಿ, ಮತ, ಧರ್ಮ, ಪಂಥ, ಪಂಗಡ ಮರೆಸುತ್ತಾ 'ಇವ ನಮ್ಮವ ಇವ ನಮ್ಮವ' ನೆಂಬ ಬಸವವಾಣಿಯನ್ನು ಬೆಳಗಿಸುತ್ತಾ 76 ಸಾರ್ಥಕ ವಸಂತಗಳನ್ನು ಪೂರೈಸಿ 77 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ನಮ್ಮೆಲ್ಲರ ಮೆಚ್ಚಿನ ಕಾರ್ಯಾಧ್ಯಕ್ಷರಾದ ಶ್ರೀಯುತ ಪ್ರಭಾಕರ ಅಣ್ಣ ಕೋರೆಯವರಿಗೆ ಆಯುಷ್ಯದ ಜೊತೆಗೆ ಅರೋಗ್ಯ, ಸಂಪತ್ತನ್ನು ಆ ಭಗವಂತ ಕರುಣಿಸಲೆಂದು ಸಮಸ್ತ ಅಭಿಮಾನಿ ಬಳಗ ಹಾಗೂ ಹಿತೈಷಿಗಳ ಪರವಾಗಿ ಮತ್ತು ನಮ್ಮ ಕೆ ಎಲ್ ಇ ಪರಿವಾರದ ವತಿಯಿಂದ ಹುಟ್ಟು ಹಬ್ಬದ ಹಾರೈಕೆಗಳನ್ನು ಅರ್ಪಿಸುತ್ತಿದ್ದೇವೆ.
ಲೇಖಕರು
ಶ್ರೀ ಶಿವಾನಂದ ಕ ಜೋಗಿಯವರ












Click it and Unblock the Notifications