ಬೆಳಗಾವಿ: ವಿಚ್ಛೇದನ ನೀಡದಿದ್ರೆ ಖಾಸಗಿ ವಿಡಿಯೋ ವೈರಲ್; ಪತ್ನಿಗೆ ಪತಿ ಬ್ಲ್ಯಾಕ್‌ಮೇಲ್-ಮುಂದಾಗಿದ್ದೇನು?
ಬೆಳಗಾವಿ, ಜನವರಿ, 04: ಕಳೆದೊಂದು ತಿಂಗಳಿನಿಂದ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಇದೀಗ ಪತ್ನಿಯ ಜೊತೆಯಲ್ಲಿದ್ದ ಖಾಸಗಿ ಕ್ಷಣದ ವಿಡಿಯೋ ಹಾಗೂ ಪೋಟೊ ಇಟ್ಟುಕೊಂಡು ವಿಚ್ಛೇದನ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸುವುದಾಗಿ ಪತಿ ಬೇದರಿಕೆಯೊಡಿರುವ ಪ್ರಕರಣವೊಂದು ಬಯಲಿಗೆ ಬಂದಿದೆ. ಹಾಗಾದರೆ ಮುಂದಾಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ತನ್ನ ಪತ್ನಿಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ವಿಚ್ಛೇದನ ನೀಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಕಿರಣ್ ಪಾಟೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತನನ್ನು ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸುಂದರ ಸಂಸಾರ ಇದ್ದರೂ ಬೆಳಗಾವಿ ನಗರದ ನಿವಾಸಿ ಕಿರಣ್ ಪಾಟೀಲ್ ವಿಚ್ಛೇದನ ನೀಡು, ಇಲ್ಲದಿದ್ದರೆ ಅಶ್ಲೀಲ ವಿಡಿಯೋ, ಫೋಟೊ ವೈರಲ್ ಮಾಡುವುದಾಗಿ ಪತ್ನಿಗೆ ಬೆದರಿಕೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಇನ್ನು ಭಯಗೊಂಡ ಪತ್ನಿ ಗಂಡನನ್ನು ಸಾಕಷ್ಟು ಬಾರಿ ಮನವೊಲಿಸಲು ಯತ್ನಿದರೂ ಪ್ರಯೋಜನವಾಗಿಲ್ಲ.
ಪತಿ ಕಿರಣ್ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದನು. ಅಷ್ಟಕ್ಕೂ ಸುಮ್ಮನಾಗದ ಆತ, ಪತ್ನಿಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುವುದನ್ನು ಮುಂದುವರೆಸಿದ್ದನು. ಇದರಿಂದ ದಿಕ್ಕು ತೋಚದಂತಾದಾಗಿ ಪತಿ ವಿರುದ್ಧ ಪತ್ನಿ ಜಿಲ್ಲಾ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಿರಣ್‌ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆತನ ಮೊಬೈಲ್ನಲ್ಲಿ ಪತ್ನಿಯ ಅಶ್ಲೀಲ ವಿಡಿಯೋ, ಫೋಟೋ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ಜಿಲ್ಲಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications