ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ, ಕರಾಳ ದಿನಾಚರಣೆಗೆ ಅನುಮತಿ ಇಲ್ಲ

ಬೆಳಗಾವಿ, ಅಕ್ಟೋಬರ್ 10: ಗಡಿನಾಡು ಬೆಳಗಾವಿಯಲ್ಲಿ 2024ನೇ ಸಾಲಿನ ಕನ್ನಡ ರಾಜ್ಯೋತ್ಸವದ ಆಚರಣೆ ಸಿದ್ಧತೆಗಳು ನಡೆಯುತ್ತಿವೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪ್ರತಿ ಬಾರಿಯೂ ಕನ್ನಡ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಗೆ ಅನುಮತಿ ಕೇಳುತ್ತದೆ. ಈ ವಿಚಾರವಾಗಿ ಕನ್ನಡ ಪರ ಸಂಘಟನೆಗಳು, ಜಿಲ್ಲಾಡಳಿತ ಮತ್ತು ಎಂಇಎಸ್ ನಡುವೆ ಜಟಾಪಟಿ ನಡೆಯುತ್ತದೆ. ಈ ಬಾರಿಯ ನವೆಂಬರ್ 1ರಂದು ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲಾ‌ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ 2024 ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ‌ ಪೊಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ‌ ಗುಳೇದ, ಜಿಲ್ಲಾ‌ ಪಂಚಾಯತ ಸಿಇಓ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ವಿವಿಧ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

No Permission For MES Black Day At Belagavi On November 1

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, "ಪ್ರತಿ ವರ್ಷದಂತೆ ಈ ಬಾರಿಯೂ ನವೆಂಬರ್ 1ರಂದು ಕರ್ನಾಟಕ‌ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ" ಎಂದು ಹೇಳಿದರು.

"ನವೆಂಬರ್ 1 ರಂದು ದೀಪಾವಳಿ ಹಬ್ಬದ ದಿನವೇ ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವದು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ‌ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು" ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

"ರಾಜ್ಯೋತ್ಸವದ ಹಿನ್ನೆಲೆಯಲ್ಲಿ‌ ಕನ್ನಡ‌ ನಾಡು ನುಡಿಗಾಗಿ ಶ್ರಮಿಸಿದ ಕನ್ನಡ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು. ಅಲ್ಲದೇ ಈ ಬಾರಿ‌ ಕನ್ನಡ ಪರ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಸನ್ಮಾನಿಸಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುವುದು. ಈ ಬಾರಿ ರಾಜ್ಯೋತ್ಸವ ಮೆರವಣಿಗೆಗೆ ಆಗಮಿಸುವ ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು" ಎಂದರು.

ಕರಾಳ ದಿನಾಚರಣೆಗೆ ವಿರೋಧ: ಸಭೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರಾಳ ದಿನಾಚರಣೆ ನಡೆಸುವ ಕುರಿತು ಚರ್ಚೆ ನಡೆಯಿತು. ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಎಂದು ಕನ್ನಡ ಪರ ಸಂಘಟನೆಗಳು ಒಕ್ಕೊರಲಿನ ಮನವಿ ಮಾಡಿದವು. ಇದಕ್ಕೆ‌ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದರು.

ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿಗಾಗಿ ಕನ್ನಡ ಪರ ಹೋರಾಟಗಾರರಾದ ಅಶೋಕ ಚಂದರಗಿ ಹೆಸರನ್ನು ಶಿಫಾರಸು ಮಾಡಬೇಕು ಎಂಬ ಕನ್ನಡ ಪರ ಸಂಘಟನೆಗಳ ಒಕ್ಕೊರಲಿನ ಒತ್ತಾಯದಂತೆ ಅವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ನವೆಂಬರ್ 1ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ‌ ವೇದಿಕೆ‌ ಸಿದ್ಧತೆ, ಧ್ವಜಾರೋಹಣ, ಆಮಂತ್ರಣ ಪತ್ರಿಕೆ, ಪಥಸಂಚಲನ, ಸಾಧಕರಿಗೆ ಸನ್ಮಾನ, ಮೆರವಣಿಗೆ, ರೂಪಕ‌ ವಾಹನಗಳಿಗೆ ಅನುಮತಿ, ಸಾಂಸಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.

ಕಳೆದ ಬಾರಿಯಂತೆಯೇ ಈ ಬಾರಿಯು ಚನ್ನಮ್ಮ‌ ವೃತ್ತದ ಪುಷ್ಪಾಲಂಕಾರವನ್ನು ಮಾಡಬೇಕು. ರಾಜ್ಯೋತ್ಸವ ವೀಕ್ಷಣೆಗೆ ಬರುವ ಸಾರ್ವಜನಿಕರ ವಾಹನಗಳಿಗೆ ಸೂಕ್ತ ನಿಲುಗಡೆಗೆ ವ್ಯವಸ್ಥೆ, ರೂಪಕ‌ ವಾಹನಗಳಿಗೆ ಗೌರವ ಧನ ನೀಡಲು ಹಾಗೂ ರೂಪಕ‌ ವಾಹನಗಳ ಮೆರವಣಿಗೆಗೆ ಹೆಚ್ಚಿನ‌ ಸಮಯವಕಾಶ ನೀಡಲು ಮನವಿ ಸಲ್ಲಿಕೆ ಮಾಡಲಾಯಿತು.

ಕನ್ನಡ ಪರ ಹೋರಾಟಗಾರ ರಾಜೀವ ಟೋಪಣ್ಣವರ ಮಾತನಾಡಿ, "ಈ ಬಾರಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಬೇರೆ ಬೇರೆ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು. ಮೈಸೂರು ದಸರಾ ಮಾದರಿ ರೀತಿ ಮೆರವಣಿಗೆ ನಡೆಸಬೇಕು" ಎಂದು ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+