ಮರಾಠಾ vs ಮರಾಠಾ: ಬೆಳಗಾವಿಯಲ್ಲಿ ಫಡ್ನವೀಸ್‌ಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಿದ ಎಂಇಎಸ್- ಬಿಜೆಪಿಗೆ ಹೊಸ ಸಂಕಷ್ಟ
ಬೆಳಗಾವಿ, ಮೇ 04: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪರ ಪ್ರಚಾರ ಮಾಡಲು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬೆಳಗಾವಿಗೆ ಬಂದಿಳಿದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಎಂಇಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕದಲ್ಲಿ ಎಂಇಎಸ್‌ಗೆ ಬಿಜೆಪಿ ಬೆಂಬಲಿಸುವುದಿಲ್ಲ ಎಂಬ ಹೇಳಿಕೆಯನ್ನು ದೇವೇಂದ್ರ ಫಡ್ನವೀಸ್ ಅವರು ಕಳೆದ ವಾರ ನೀಡಿದ್ದರು. ಇದಕ್ಕೆ ಎಂಇಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಫಡ್ನವೀಸ್‌ಗೆ ಸಂಜಯ್ ರಾವುತ್ ಟಾಂಗ್
ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಬೆಂಬಲ ಕೋರಲು ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಇದೇ ರೀತಿ ಬೆಳಗಾವಿಗೆ ತೆರಳಿ ಎಂಇಎಸ್ ಪರ ಪ್ರಚಾರ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
'ಬಿಜೆಪಿಯವರು ಎಂಇಎಸ್ ಸೋಲಿಸಲು ಅಲ್ಲಿಗೆ (ಬೆಳಗಾವಿ) ಹೋಗಿರುವುದರಿಂದ ಪರಿಸ್ಥಿತಿ ವಿಭಿನ್ನವಾಗಿದೆ. ಅವರು (ಬಿಜೆಪಿ) ಮರಾಠಿ ಜನರನ್ನು ಸೋಲಿಸಲು ಹೋಗಿದ್ದಾರೆ. ಇದು ನಾಚಿಕೆಗೇಡಿನ ವಿಚಾರ' ಎಂದು ರಾವುತ್ ಹೇಳಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷದಲ್ಲಿ ಭಾಗವಹಿಸಿದ್ದಾಗಿ ಸಿಎಂ ಏಕನಾಥ್ ಶಿಂಧೆ ಹೇಳಿಕೊಳ್ಳುತ್ತಿದ್ದು, ಇದೇ ವೇಳೆ ಬೆಳಗಾವಿಯಲ್ಲಿ ಎಂಇಎಸ್ ಬೆಂಬಲಿಸಿ ಬಿಜೆಪಿಯನ್ನು ವಿರೋಧಿಸಬೇಕು ಎಂದು ರಾವುತ್ ತಿಳಿಸಿದ್ದಾರೆ.
ಕಳೆದ ವರ್ಷ ಜೂನ್‌ನಿಂದ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿಂಧೆ ಅವರ ಶಿವಸೇನೆ ಆಡಳಿತ ಮಿತ್ರಪಕ್ಷಗಳಾಗಿವೆ.
ಬೆಳಗಾವಿ-ಕಾರವಾರದ ಮರಾಠಿ ಮಾತನಾಡುವ ಜನರಿಗೆ ಶಿವಸೇನೆ (ಯುಬಿಟಿ) ಬದ್ಧವಾಗಿದೆ ಮತ್ತು (ಅವಿಭಜಿತ) ಶಿವಸೇನೆಯು 69 ಕಾರ್ಯಕರ್ತರನ್ನು ಹುತಾತ್ಮರನ್ನಾಗಿ ಮಾಡಿದೆ. ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಅವರನ್ನು ಗಡಿ ವಿವಾದದಲ್ಲಿ ಮೂರು ತಿಂಗಳ ಕಾಲ ಜೈಲಿನಲ್ಲಿರಿಸಲಾಯಿತು' ಎಂದು ರಾಜ್ಯಸಭಾ ಸಂಸದ ರಾವುತ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದ್ದರೆ, ರಾಷ್ಟ್ರೀಯವಾದಿ ಕಾಂಗ್ರೆಸ್ ( NCP ) ಪಕ್ಷವೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.












Click it and Unblock the Notifications