ಮಹಾರಾಷ್ಟ್ರ ಸರ್ಕಾರದಿಂದ ಕರ್ನಾಟಕದ 865 ಪ್ರದೇಶದಲ್ಲಿ ಆರೋಗ್ಯ ವಿಮೆ ಜಾರಿ, ಇದರ ಉದ್ದೇಶ ಏನು?
ಬೆಳಗಾವಿ, ಜನವರಿ, 05: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿದ್ದರೂ ಮಹಾರಾಷ್ಟ್ರ ಮತ್ತೆ ಗಡಿ ವಿವಾದವನ್ನ ಕೆದಕಿದೆ. ಕರ್ನಾಟಕದ 865 ಪ್ರದೇಶದಲ್ಲಿ ಆರೋಗ್ಯ ವಿಮೆ ಜಾರಿಗೊಳಿಸಿದ್ದು, ಮಹಾ ಸಂಸದ, ಮಹಾ ಸಿಎಂ ವಿಶೇಷಾಧಿಕಾರಿ ಬೆಳಗಾವಿ ನೆಲದಲ್ಲಿ ಬಂದು ಯೋಜನೆಗೆ ಚಾಲನೆ ಕೊಟ್ಟರೂ, ಕರ್ನಾಟಕ ಸರ್ಕಾರ ಮಾತ್ರ ಮೌನವಹಿಸಿದೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಸದ್ದು ಮಾಡುತ್ತಿದೆ. ಆರೋಗ್ಯ ವಿಮೆ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ. ಎರಡು ರಾಜ್ಯಗಳ ಗಡಿ ನಿಯಮವನ್ನು ಸಿಮ್ಮೊಲಂಘನೆ ಮಾಡಿ ಉದ್ಧಟತನ ಪ್ರದರ್ಶನ ಮಾಡಿದೆ ಮಹಾರಾಷ್ಟ ಸರ್ಕಾರ. ಕಳ್ಳನಂತೆ ಬಂದು ಆರೋಗ್ಯ ವಿಮೆ ಜಾರಿ ಮಾಡಿದೆ ಮಹಾರಾಷ್ಟ್ರ ಸರ್ಕಾರ. ಆದರೆ ಕಂಡು ಕಾಣದಂತೆ ಕಣ್ಮುಚಿ ಕುಳಿತಿದೆ ರಾಜ್ಯ ಸರ್ಕಾರ.

ಕರ್ನಾಟಕದಲ್ಲಿ ಇರುವ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಜಾರಿ ಮಾಡುವ ಮೂಲಕ ಸುಪ್ರೀಂ ಕೋರ್ಟ್ ಕೇಸ್‌ನಲ್ಲಿ ಅನಕೂಲ ಆಗುವ ಸಾಕ್ಷಿ ಸೃಷ್ಟಿಸುತ್ತಿದೆ. ಈ ಮೂಲಕ ಮತ್ತೆ ಗಡಿ ವಿವಾದಕ್ಕೆ ವಿಷ ಬೀಜ ಬಿತ್ತಿದೆ ಮಹಾರಾಷ್ಟ್ರ ಸರ್ಕಾರ. ಮಹಾತ್ಮ ಪುಲೆ ಆರೋಗ್ಯ ವಿಮೆ ಜಾರಿ ಮಾಡಲು ಬೆಳಗಾವಿಯಲ್ಲಿ ಸಭೆ ನಡೆಸಿದೆ. ಬೆಳಗಾವಿಯ ಮರಾಠ ಮಂದಿರ ಸಭಾಭವನದಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಮಹಾರಾಷ್ಟ್ರ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷ ಧೈರ್ಯಶೀಲ್ ಮಾನೆ ನೇತೃತ್ವದಲ್ಲಿ ಸಭೆ ನಡೆದಿದೆ.
ಈ ಸಭೆಯಲ್ಲಿ ಎಂಇಎಸ ಪುಂಡರಿಗೆ ಮಹಾರಾಷ್ಟ ಸಿಎಂ ವಿಶೇಷಾಧಿಕಾರಿ ಮಂಗೇಶ ಚಿವಟೆ ಆರೋಗ್ಯ ವಿಮೆ ಅನುಷ್ಠಾನದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಅಲ್ಲದೇ ಆರೋಗ್ಯ ವಿಮೆ ಅನುಷ್ಠಾನದ ಅಧಿಕಾರ ಎಂಇಎಸ್ ಮುಖಂಡರಿಗೆ ಹಸ್ತಾಂತರಿಸಲಾಗಿದೆ. ಬೆಳಗಾವಿ ಸೇರಿ 865 ಗ್ರಾಮಗಳಲ್ಲಿ ಯೋಜನೆ ಜಾರಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಇನ್ನೂ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ ನಮ್ಮ ಸರ್ಕಾರ ಜಾಣ ನಿದ್ರೆಗೆ ಜಾರಿದೆ. ಆಡಳಿತ, ವಿಪಕ್ಷಗಳು ಪರಸ್ಪರ ರಾಜಕೀಯ ಕಿತ್ತಾಟದಲ್ಲಿ ಮಗ್ನವಾಗಿವೆ. ಇದೇ ಕಾರಣಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಸೂಚನೆ ಮೇರೆಗೆ ಬೆಳಗಾವಿಯಿಂದಲೇ ಆರೋಗ್ಯ ವಿಮೆ ಜಾರಿಗೆ ಚಾಲನೆ ಕೊಟ್ಟಿದ್ದಾರೆ. ಅಸ್ತಿತ್ವ ಕಳೆದುಕೊಂಡ ಎಂಇಎಸಗೆ ಮತ್ತು ಗಡಿ ವಿವಾದಕ್ಕೆ ಜೀವ ತುಂಬಲು ಮಹಾರಾಷ್ಟ್ರ ಸರ್ಕಾರ ಈ ಆರೋಗ್ಯ ವಿಮೆ ಜಾರಿ ಮಾಡಿದೆ.
ಕರಾಳ ದಿನಾಚರಣೆ, ಮಹಾಮೇಳಾಗೆ ಇದೇ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದರು. ಈಗ ನೋಡಿದ್ರೆ ಕಳ್ಳರಂತೆ ಬಂದು ಬೆಳಗಾವಿ ನೆಲದಲ್ಲಿ ನಿಂತುಕೊಂಡು ಗಡಿ ವಿವಾದವನ್ನು ಮತ್ತೆ ಬಡಿದು ಎಬ್ಬಿಸುವ ಕೃತ್ಯ ಎಸಗಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಮಾತ್ರ ಗಡಿಯಲ್ಲಿ ಇಷ್ಟೆಲ್ಲಾ ಆದರೂ ಮೌನವಹಿಸಿದೆ. ಇದರೊಂದಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯೂ ಸಹ ನಾಡದ್ರೋಹಿ ಕೃತ್ಯ ನಡೆಸುವವರಿಗೆ ಬ್ರೇಕ್ ಹಾಕುವ ಕೆಲಸವನ್ನು ಮಾಡಿಲ್ಲ. ಇದು ಸಮಸ್ತ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಸದ್ದಿಲ್ಲದೆ ಬೆಳಗಾವಿ ನೆಲದಿಂದಲೇ ಮಹಾರಾಷ್ಟ್ರ ಸರ್ಕಾರ ತನ್ನ ಆರೋಗ್ಯ ವಿಮೆ ಜಾರಿಗೊಳಿಸುತ್ತಿದೆ. ಇದನ್ನು ತಡೆಯಬೇಕಾದ ರಾಜ್ಯ ಸರ್ಕಾರ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿದೆ. ಸರ್ಕಾರದ ಈ ಉದಾಸೀನತೆ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದ ಹೋರಾಟದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications