ಸರ್ಕಾರದಿಂದ 'ಜಲಧಾರೆ' ಯೋಜನೆ: ಪ್ರತಿ ಗ್ರಾಮಕ್ಕೆ ಕುಡಿಯುವ ನೀರು
ಬೆಂಗಳೂರು, ಡಿಸೆಂಬರ್ 18: ಪ್ರತಿ ಹಳ್ಳಿಗಳಿಗೂ ಕುಡಿಯುವ ನೀರು ಕಲ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು 'ಜಲಧಾರೆ' ಹೆಸರಿನ ಯೋಜನೆ ಜಾರಿ ಮಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದರು
ಮೇಲ್ಮನೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನದಿ ಮೂಲಗಳಿಂದ ದೊರೆಯುವ ನೀರನ್ನು ಉಪಯೋಗಿಸಿಕೊಂಡು ಶುದ್ಧ ನೀರಿನ ಘಟಕಗಳ ಮೂಲಕ ವರ್ಷಪೂರ್ತಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಮೇಲ್ಮನೆಯಲ್ಲಿ ತೇಜಸ್ವಿನಿ ಗೌಡ ಅವರು ಕೇಳಿದ ಪ್ರಶ್ನೆಗೆ ಕೃಷಿ ಬೈರೇಗೌಡ ಉತ್ತರ ನೀಡಿದರು. ಈಗಾಗಲೇ ಯೋಜನೆಯ ನೀಲಿನಕ್ಷೆ ತಯಾರಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

400-500 ಗ್ರಾಮಗಳಲ್ಲಿ ನೀರಿನ ಕೊರತೆ
ರಾಜ್ಯದಲ್ಲಿ ಅಂದಾಜು 400ರಿಂದ 500 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬೇಸಿಗೆಯ ಹೊಸ್ತಿಲಲ್ಲಿ ಇದ್ದು, ಸರ್ಕಾರ ನೀರಿನ ಸಮಸ್ಯೆಯನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಕೈಗೊಂಡಿದೆ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಂಥ ಕಡೆ ಖಾಸಗಿಯವರಿಂದ ಟ್ಯಾಂಕರ್‌ಗಳ ಮೂಲಕ ನೀರನ್ನು ಖರೀದಿಸಿ ಪೂರೈಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ನೀರು ಸಂಸ್ಕರಣಾ ಘಟಕ ಪ್ರಾರಂಭಿಸಿದ್ದೆವು
ಕಳೆದ ಬಾರಿ ನಮ್ಮ ಸರ್ಕಾರವಿದ್ದಾಗ ನೀರು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಿದ್ದೇವೆ. ಇವುಗಳನ್ನು ಇನ್ನೂ ಹೆಚ್ಚು ಮಾಡಲಾಗುವುದು ಮತ್ತು ಅದರ ಮೂಲಕವೇ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ವಿತರಿಸಲಾಗುವುದು ಎಂದರು.

ಕೇಂದ್ರದಿಂದ ಅನುದಾನ ಬಂದಿಲ್ಲ
ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯ ಅನುದಾನ ಮೂರು ವರ್ಷದಿಂದ ರಾಜ್ಯಕ್ಕೆ ಸಿಕ್ಕಿಲ್ಲ ಹಾಗಾಗಿ ಗ್ರಾಮಗಳ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಆಗಿದೆ. ಕೇಂದ್ರ 60% ಮತ್ತು ರಾಜ್ಯ 40% ಅನುದಾನ ನೀಡಿ ಈ ಕಾರ್ಯ ಮಾಡಲಾಗುತ್ತದೆ. ಕೇಂದ್ರವನ್ನು ಅನುದಾನಕ್ಕಾಗಿ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

ಪಂಚಾಯತ್ ರಾಜ್‌ಗೆ ಹೆಚ್ಚಿನ ಬಲ
ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಇನ್ನು ಮುಂದೆ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದಲೇ ಪ್ರಾರಂಭಿಸಲಾಗುವುದು. ಜಿಲ್ಲಾ ಹಂತದಲ್ಲಿ ಇದನ್ನು ನಮ್ಮ ಇಲಾಖೆಯವರೇ ನಿರ್ವಹಣೆ ಮಾಡುತ್ತಾರೆ ಎಂದು ಕೃಷ್ಣಬೈರೇಗೌಡ ಹೇಳಿದರು.












Click it and Unblock the Notifications