ಟಿಕೆಟ್ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡಬೇಡಿ; ಲಕ್ಷ್ಮಣ್ ಸವದಿ, ಕುಮಟಹಳ್ಳಿಗೆ ಪ್ರಲ್ಹಾದ್ ಜೋಶಿ ಸೂಚನೆ
ಬೆಳಗಾವಿ, ಏಪ್ರಿಲ್. 03: ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ತಲೆದೋರಿದ್ದು, ಭಿನ್ನಮತ ಶಮನಕ್ಕೆ ಹಿರಿಯ ಬಿಜೆಪಿ ನಾಯಕರು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಟಿಕೆಟ್ ಹಂಚಿಕೆ ಕುರಿತು ಉಂಟಾಗಿರುವ ಈ ಸಮಸ್ಯೆ ಸರಿಪಡಿಸಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ತಮ್ಮ ದಾಳ ಹೂಡಿದ್ದು, ಬಿಜೆಪಿ ನಾಯಕರ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಜಿಲ್ಲಾ ನಾಯಕರ ಜೊತೆ ಚರ್ಚಿಸಿದ ಪ್ರಲ್ಹಾದ್ ಜೋಶಿ, ಟಿಕೆಟ್ ಹಂಚಿಕೆ ವಿಚಾರವಾಗಿ ಬಹಿರಂಗವಾಗಿ ಮಾತನಾಡದೇ ಪಕ್ಷದ ನಿರ್ಧಾರಕ್ಕೆ ಬಿಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಸೂಚನೆ ನೀಡಿದ್ದಾರೆ.

ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷದ ತೀರ್ಮಾನವನ್ನ ಎಲ್ಲರು ಒಪ್ಪಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಈ ಬಗ್ಗೆ ಏನೇ ಹೇಳುವುದಿದ್ದರು, ಅದನ್ನು ಮಾಧ್ಯಮಗಳ ಎದುರಿಗೆ ಹೇಳುವ ಬದಲು ತಮ್ಮ ಗಮನಕ್ಕೆ ತರುವಂತೆ ಬೆಳಗಾವಿ ಬಿಜೆಪಿ ನಾಯಕರಿಗೆ ಸಚಿವ ಪ್ರಲ್ಹಾದ್ ಜೋಶಿ ಸಲಹೆ ನೀಡಿದ್ದಾರೆ.
ಬೆಳಗಾವಿಯ 18 ಕ್ಷೇತ್ರಗಳು ರಾಜ್ಯ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಪಕ್ಷದ ಗೆಲುವಿಗೆ ಎಲ್ಲರು ಕೈ ಜೋಡಿಸಬೇಕು. ಸಣ್ಣ ಪುಣ್ಣ ವ್ಯತ್ಯಾಸಗಳನ್ನ ಮರೆತು ಎಲ್ಲರು ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಬೆಳಗಾವಿ ಬಿಜೆಪಿ ನಾಯಕರಿಗೆ ಪ್ರಲ್ಹಾದ್ ಜೋಶಿ ಕರೆ ನೀಡಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಈ 18 ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಮಹತ್ವದ ವಿಷಯವಾಗಿದೆ.
ಬಿಜೆಪಿ ನಾಯಕರ ಜೊತೆಗಿನ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, "ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿಲ್ಲ ಎಂದು ಬಿಂಬಿಸುವ ಅಗತ್ಯವಿಲ್ಲ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಬೆಳಗಾವಿ ನಾಯಕರ ಜೊತೆ ಒಂದು ಸುತ್ತಿನ ಸಭೆ ನಡೆಸಿ ಸರಿಪಡಿಸಿದ್ದಾರೆ" ಎಂದು ತಿಳಿಸಿದ್ದಾರೆ.

ಮುಂದುವರಿದು, "ಇಂದು ನಾನು ಕೂಡ ಜಿಲ್ಲಾ ನಾಯಕರ ಜೊತೆ ಚರ್ಚಿಸಿದ್ದೇನೆ. ಕೆಲವು ಸಣ್ಣ ಪುಟ್ಟ ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ ಸರಿಪಡಿಸಲಾಗುವುದು. ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಟಹಳ್ಳಿ ಅವರಿಗೆ ಟಿಕೆಟ್ ಆಯ್ಕೆ ವಿಚಾರವಾಗಿ ಪಕ್ಷ ತೆಗೆದುಕೊಳ್ಳು ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗಬೇಕು ಎಂದು ಇಬ್ಬರಿಗೂ ಸೂಚಿಸಲಾಗಿದೆ. ಇಬ್ಬರು ಪಕ್ಷದ ತೀರ್ಮಾನವನ್ನ ಒಪ್ಪಿಕೊಳ್ಳುವುದಾಗಿ ನನ್ನ ಬಳಿ ಹೇಳಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಬೆಳಗಾವಿಯ 18 ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿನ ರಣತಂತ್ರಗಳ ಕುರಿತಂತೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿಲಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನ ಈ ಬಾರಿ ಬಿಜೆಪಿ ಬೆಳಗಾವಿಯಲ್ಲಿ ಗೆಲ್ಲಲಿದೆ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ 18 ಸ್ಥಾನಗಳ ಪೈಕಿ ಬಿಜೆಪಿ 13 ಸ್ಥಾನಗಳನ್ನು ಗೆದ್ದಿತ್ತು ಮತ್ತು ಕಾಂಗ್ರೆಸ್ 5 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಬಿಜೆಪಿ 14 ರಿಂದ 17 ಸ್ಥಾನಗಳನ್ನು ಗೆಲ್ಲುವ ಹಂಬಲದಲ್ಲಿದ್ದರೆ, ಕಾಂಗ್ರೆಸ್ 7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.












Click it and Unblock the Notifications