ಎಂಇಎಸ್ ನಿಷೇಧಕ್ಕೆ ನಡೆದಿದೆ ಚಿಂತನೆ
ಬೆಳಗಾವಿ, ಜು. 29 : ಭಾಷೆ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪದೇಪದೇ ಕ್ಯಾತೆ ತೆಗೆಯುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ಯಳ್ಳೂರು ಗ್ರಾಮ ಸಹಜ ಸ್ಥಿತಿಯತ್ತ ಮರಳಿದೆ. ಆದರೆ, ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ನಿಷೇಧಾಜ್ಞೆ ಮುಂದುವರೆಸಲಾಗಿದೆ.
ಬೆಳಗಾವಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಭಾಷೆ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪದೇಪದೇ ಕ್ಯಾತೆ ತೆಗೆಯುವ ಎಂಇಎಸ್ ಅನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಶೀಘ್ರದಲ್ಲೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮರಾಠಿ ಭಾಷಿಕರಿಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾದರೆ ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿ ಪಾಟೀಲ ಹಾಗೂ ಖಾನಾಪುರ ಶಾಸಕ ಅರವಿಂದ ಪಾಟೀಲ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು. ಇಬ್ಬರು ಶಾಸಕರು ಮರಾಠಿ ಫಲಕ ಹಾಕಲು ಪ್ರಚೋದನೆ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಹಜಸ್ಥಿತಿಗೆ ಯಳ್ಳೂರು : ಮೂರು ದಿನಗಳಿಂದ ಗಲಭೆಗೆ ಕಾರಣವಾಗಿದ್ದ ಯಳ್ಳೂರು ಗ್ರಾಮ ಸೋಮವಾರ ಸಹಜ ಸ್ಥಿತಿಯತ್ತ ಮರಳಿದೆ. ಆದರೆ, ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ನಿಷೇಧಾಜ್ಞೆ ಮುಂದುವರಿದಿದೆ. ವಡಗಾವಿ ರಸ್ತೆಯಲ್ಲಿ ಹಾಗೂ ವಿವಾದಾತ್ಮಕ ಫಲಕ ತೆರವುಗೊಳಿಸಿದ ಸ್ಥಳದಲ್ಲಿ ಪೊಲೀಸರು ಚೆಕ್ ಪೋಸ್ಟ್ ಆರಂಭಿಸಿದ್ದಾರೆ. [ಗಡಿಭಾಗದಲ್ಲಿ ಗಡಿಬಿಡಿ, ಬೆಳಗಾವಿಯಲ್ಲಿ ಏನಾಗುತ್ತಿದೆ?]
ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಕನ್ನಡ ಮತ್ತು ಮರಾಠಿ ಸರ್ಕಾರಿ ಶಾಲೆಗೆ ರಜೆ ನೀಡಲಾಗಿದೆ. ಇದೇ ವೇಳೆ ಸೋಮವಾರ ಜಿಲ್ಲಾಧಿಕಾರಿ ಎನ್. ಜಯರಾಂ, ಐಜಿಪಿ ಭಾಸ್ಕರರಾವ್, ವಿಶೇಷ ಅಧಿಕಾರಿ ಹೇಮಂತ ನಿಂಬಾಳ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರೊಂದಿಗೆ ಸಚಿವ ಜಾರಕಿಹೊಳಿ ಸಭೆ ನಡೆಸಿದರು.

ರಾಜ್ಯೋತ್ಸವಕ್ಕೆ ಅವಕಾಶ ಇಲ್ಲ : ಮಹಾರಾಷ್ಟ್ರದ ಕೈಗಾರಿಕಾ ಸಚಿವ ನಾರಾಯಣ ರಾಣೆ ಅವರ ಪುತ್ರ ನಿತಿನ್ ರಾಣೆ, ಯಳ್ಳೂರು ಘಟನೆಗೆ ಪ್ರತಿಭಟನಾರ್ಥವಾಗಿ ಮುಂಬೈನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಆಗ್ರಹಿಸಿದ್ದಾರೆ. [ಎಂಇಎಸ್ ಪುಂಡಾಟ: ಯಾರು ಏನು ಹೇಳಿದರು?]
ಬೆಂಗಳೂರಿನಲ್ಲಿ ಪ್ರತಿಭಟನೆ : ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿಸಿವೆ. ರಾಜ್ಯದ ಶಾಂತಿ ಕದಡುತ್ತಿರುವ ಎಂಇಎಸ್ ಅನ್ನು ನಿಷೇಧಿಸಬೇಕು. ನಾಮಫಲಕ ಹಾಕಿರುವವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.












Click it and Unblock the Notifications