ಬರ; ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನೀರೊದಗಿಸಲು ಟ್ಯಾಂಕರ್

ಬೆಳಗಾವಿ, ನವೆಂಬರ್ 27; "ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸ್ವಂತ ಟ್ಯಾಂಕರ್ ಹೊಂದಲು ಕೆಲವು ವರ್ಷಗಳ ಹಿಂದೆ ತಿಳಿಸಲಾಗಿತ್ತು. ಆದ್ದರಿಂದ ಈ ಬಾರಿ ಪ್ರತಿ ಗ್ರಾಮ ಪಂಚಾಯಿತಿ ಕಡ್ಡಾಯವಾಗಿ ಟ್ಯಾಂಕರ್ ಖರೀದಿಸಿ. ಕುಡಿಯುವ ನೀರಿನ ಕೊರತೆ ಉಂಟಾದಲ್ಲಿ ಒದಗಿಸಬೇಕು" ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು.

ಬರ ನಿರ್ವಹಣೆ ಕುರಿತು ಸಚಿವರು ಸುವರ್ಣ ವಿಧಾನಸೌಧದಲ್ಲಿ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. "ಒಂದು ವೇಳೆ ಟ್ಯಾಂಕರ್ ಖರೀದಿ ಮಾಡದೇ ಇದ್ದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಿ ಸೂಕ್ತ ಯೋಜನೆ ರೂಪಿಸಬೇಕು" ಎಂದು ನಿರ್ದೇಶನ ನೀಡಿದರು.

Drought Water Tanker For Each Gram Panchayat To Provide Drinking Water

"ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಅನುಕೂಲವಾಗುವಂತೆ ಜಿಲ್ಲೆಯ ಪ್ರತಿಯೊಂದು ಪಂಚಾಯಿತಿಗಳು ಕೂಡಲೇ ಸ್ವಂತ ಟ್ಯಾಂಕರ್ ಖರೀದಿಸಲು ಕ್ರಮ ಕೈಗೊಳ್ಳಬೇಕು" ಎಂದರು.

ಬರ ನಿರ್ವಹಣಾ ಕಾಮಗಾರಿ; "ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬೆಳೆ ಪರಿಹಾರ ಹಾಗೂ ಮೇವು ಪೂರೈಕೆಗೆ ಕ್ರಮ ವಹಿಸಬೇಕು. ನರೇಗಾ ಯೋಜನೆಯಡಿ ಸಮರ್ಪಕ ಬರ ನಿರ್ವಹಣೆಗೆ ಅನುಕೂಲವಾಗುವಂತಹ ಮತ್ತು ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು" ಎಂದು ತಿಳಿಸಿದರು.

"ಬಹುತೇಕ ಕಡೆ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗಳು ಅಪೂರ್ಣವಾಗಿವೆ ಹಾಗೂ ಕಳಪೆಯಾಗಿವೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ಕುಡಿಯುವ ನೀರಿನ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು" ಎಂದು ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.

422 ಕೋಟಿ ರೂಪಾಯಿ ಪರಿಹಾರಕ್ಕೆ ಮನವಿ: ಸಭೆಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, "ಮುಂಗಾರು ಮಳೆ ಕೊರತೆ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹಿಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶ ಕೊರತೆಯಾಗಿದೆ. ಪರ್ಯಾಯ ಬೆಳೆಗೆ ಅಗತ್ಯವಿರುವ ಬಿತ್ತ ಬೀಜ ದಾಸ್ತಾನು ಇರುತ್ತದೆ. ಬೀಜ-ಗೊಬ್ಬರಗಳ ಕೊರತೆ ಇರುವುದಿಲ್ಲ" ಎಂದು ತಿಳಿಸಿದರು.

"3.53 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 11,814 ಹೆ. ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 3.65 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುತ್ತದೆ. ರಾಜ್ಯ ಸರಕಾರ 22.50 ಕೋಟಿ ಬಿಡುಗಡೆ ಮಾಡಿದ್ದು, ಒಟ್ಟಾರೆ 31 ಕೋಟಿ ರೂಪಾಯಿ ಜಿಲ್ಲಾಡಳಿತದ ಬಳಿ ಇರುತ್ತದೆ. ಬರ ನಿರ್ವಹಣೆಗೆ ಹಣದ ಕೊರತೆ ಇರುವುದಿಲ್ಲ. ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ 422 ಕೋಟಿ ಪರಿಹಾರ ಕೇಂದ್ರ ಸರಕಾರದಿಂದ ಬಿಡುಗಡೆಯಾಗಬೇಕಿದೆ. ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ಕೊರತೆ ಇರುವುದಿಲ್ಲ. ಜನವರಿ ಬಳಿಕ ಅಗತ್ಯವಿರುವ ಮೇವು ಖರೀದಿಗೆ ಟೆಂಡರ್ ಕರೆಯಲಾಗುವುದು" ಎಂದು ವಿವರಣೆ ನೀಡಿದರು.

"ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇವು ಸಾಗಾಣಿಕೆಗೆ ನಿರ್ಬಂಧಿಸಲಾಗಿದೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, "ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಟ್ಯಾಂಕರ್ ನೀರು ಪೂರೈಕೆ ಹಾಗೂ ಕೊಳವೆಬಾವಿ ದುರಸ್ತಿ ಮತ್ತಿತರ ಕೆಲಸಗಳಿಗೆ 35 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ" ಎಂದರು.

"ಕೆರೆಗಳ ನೀರನ್ನು ಕುಡಿಯುವ ನೀರಿಗಾಗಿ ಮೀಸಲಿಡಲು ಉಪ ವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯ ಕೆರೆಗಳ ನೀರು ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಬೇಸಿಗೆ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಎರಡು ಬಾರಿ ಕುಡಿಯುವ ನೀರು ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುವುದರಿಂದ ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಮುಂಚಿತವಾಗಿಯೇ ಚರ್ಚೆ ನಡೆಸಬೇಕು" ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+