ಸಾಹುಕಾರ ಎಂದ ಡಿಕೆಶಿ ವಿರುದ್ಧ ಸತೀಶ್ ಜಾರಕಿಹೊಳಿ ಬೇಸರ
ಬೆಳಗಾವಿ, ಮೇ 01: ಸತೀಶ್ ಜಾರಕಿಹೊಳಿ ಸಾಹುಕಾರರು, ನಾವು ಪ್ರಜೆಗಳು ಎಂದು ಕಾಲೆಳೆದಿದ್ದ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸತೀಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಡಿಕೆ ಶಿವಕುಮಾರ್ ಅವರು ನನ್ನ ಬಗ್ಗೆ ವಿನಾ ಕಾರಣ ಮಾತನಾಡಬಾದಿತ್ತು' ಎಂದು ಅವರು ಬೇಸರ ಹೊರಹಾಕಿದ್ದಾರೆ.
'ನಾನೂ ಅವರ ಬಗ್ಗೆ ಮಾತನಾಡಿಲ್ಲ, ಡಿ.ಕೆ.ಶಿವಕುಮಾರ್ ಉಸ್ತುವಾರಿ ಆಗುವುದು ಬೇಡ ಎಂತಲೂ ನಾನು ಎಲ್ಲೂ ಹೇಳಿಲ್ಲ, ಅಂತಹುದರಲ್ಲಿ ಅವರು ಏಕೆ ಮಾತನಾಡಬೇಕು' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ಗುಂಡ್ಲುಪೇಟೆ ಮತ್ತು ಬಳ್ಳಾರಿ ಕ್ಷೇತ್ರಗಳಲ್ಲಿ ಡಿ.ಕೆ.ಶಿವಕುಮಾರ್ ಅವರು ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ, ಬಳ್ಳಾರಿಯಲ್ಲಿ ಅವರ ಅಡಿಯಲ್ಲಿಯೇ ನಾವು ಕೆಲಸ ಮಾಡಿದ್ದೆವು, ಹಾಗಿದ್ದ ಮೇಲೆ ನಮಗೆ ಅಸಮಾಧಾನ ಹೇಗೆ ಇರುತ್ತದೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ನನ್ನ ಬಗ್ಗೆ ಅನವಶ್ಯಕವಾಗಿ ಹೇಳಿಕೆ ಕೊಟ್ಟಿದ್ದು, ಯಾರ ಬಗ್ಗೆಯಾದರೂ ಮಾತನಾಡುವ ಮುನ್ನಾ ಅವರ ಬಗ್ಗೆ ತಿಳಿದುಕೊಂಡು ಮಾತನಾಡುವುದು ಉತ್ತಮ ಎಂದು ಸತೀಶ್ ಅವರು ಟಾಂಗ್ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಉಪಚುನಾವಣೆಗೆ ಉಸ್ತುವಾರಿಯಾಗಿ ನೇಮಿಸುವ ಬಗ್ಗೆ ಚರ್ಚೆ ನಡೆದಿತ್ತು, ಆದರೆ ಇದಕ್ಕೆ ಕೆಲವು ಉತ್ತರ ಕರ್ನಾಟಕದ ಶಾಸಕರು ಒಪ್ಪಿರಲಿಲ್ಲ, ಇದರಲ್ಲಿ ಸತೀಶ್ ಅವರು ಸೇರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿ ಅವರು 'ಸತೀಶ್ ಅವರು ಸಾಹುಕಾರರು, ನಾವು ಪ್ರಜೆಗಳು' ಎಂದು ಹೇಳಿದ್ದರು.












Click it and Unblock the Notifications