ಈ ದೇವಿಗೆ ಸಾರಾಯಿ, ಸಿಗರೇಟು ಅರ್ಪಿಸಿದ್ರೆ ಇಷ್ಟಾರ್ಥಗಳು ಈಡೇರುವುದು ಪಕ್ಕಾ ಅಂತೆ!
ಗೋಕಾಕ್, ಅಕ್ಟೋಬರ್, 01: ಸಾಮಾನ್ಯವಾಗಿ ದೇವರಿಗೆ ಭಕ್ತರು ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸುವುದನ್ನು ನಾವು ನೀವೆಲ್ಲಾ ನೋಡಿರುವಂತದ್ದು. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಭಕ್ತರು ದೇವಿಗೆ ಸಾರಾಯಿ, ಸಿಗರೇಟು ಅರ್ಪಣೆ ಮಾಡುತ್ತಿರುವುದು ವಿಶೇಷವಾದ ಹರಕೆಯಾಗಿದೆ. ಹೀಗೆ ದೇವಿಗೆ ಭಕ್ತರು ಸಾರಾಯಿ ಕುಡಿಸಿ, ಸಿಗರೇಟು ಸೇದಿಸುತ್ತಿರುವುದು ಗೋಕಾಕ್ ತಾಲೂಕಿನ ಕಡಬಗಟ್ಟಿ ಗುಡ್ಡದ ಶ್ರೀ ಚೌಡೇಶ್ವರಿ ದೇವಿ ಮಂದಿರದಲ್ಲಿ ಕಂಡುಬಂದಿದೆ.
ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಯಲ್ಲಿ ಹರಿಕೆ ಮಾಡಿಕೊಳ್ಳುವ ಭಕ್ತರು ಮಂದಿರದ ಹಿಂಭಾಗದ ಮರಕ್ಕೆ ತೆಂಗಿನಕಾಯಿ ಕಟ್ಟುತ್ತಾರೆ. ಬೇಡಿಕೆ ಈಡೇರಿದ ಬಳಿಕ ಚೌಡೇಶ್ವರಿ ದೇವಿಗೆ ತಮ್ಮ ಭಕ್ತಿ ಮತ್ತು ಶಕ್ತಿಯನುಸಾರ ಹೂವು, ಹಣ್ಣು, ಕಾಯಿ, ಎಣ್ಣೆಯ ಜೊತೆಗೆ ಸಾರಾಯಿ, ಸಿಗರೇಟ್ ಅನ್ನೂ ಸಮರ್ಪಿಸಿ ಭಕ್ತಿ ಪರಾಕಾಷ್ಠೆ ಮೆರೆಯುತ್ತಿದ್ದಾರೆ. ಇನ್ನು ಸರ್ಪದ ಮೇಲೆ ಚೌಡೇಶ್ವರಿ ದೇವಿ ಕುಳಿತುಕೊಂಡಿರುವುದು ಇಲ್ಲಿನ ಮತ್ತೊಂದು ವಿಶೇಷತೆ.

ಆದರೆ ಪ್ರತಿವರ್ಷದಂತೆ ಜೋಕುಮಾರ ಹುಣ್ಣಿಮೆ ದಿನ ಜಾತ್ರೆ ಹಿನ್ನೆಲೆಯಲ್ಲಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಆಗ ಚಿನ್ನಾಭರಣ, ಹೂವುಗಳಿಂದ ಸಿಂಗರಿಸಲಾಗಿತ್ತು. ದೇವಿಯ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿತ್ತು. ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರದ ಮುಂಬೈ, ಪುಣಾ, ಕೊಲ್ಹಾಪುರ, ಬೆಂಗಳೂರಿನಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೀಗೆ ಭಕ್ತರು ನೀಡುವ ವಿವಿಧ ಕಂಪನಿಗಳ ಸಾರಾಯಿಯನ್ನು ಲಾಳಿಕೆ ಮೂಲಕ ಸೇವಕರು ದೇವಿಗೆ ಕುಡಿಸುತ್ತಾರೆ. ಅಲ್ಲದೇ ಕೈ ಹಿಡಿದು ಸಿಗರೇಟ್ ಅನ್ನೂ ಸೇದಿಸುತ್ತಾರೆ.
ಚೌಡೇಶ್ವರಿ ದೇವಿ ತುಂಬಾ ಶಕ್ತಿಶಾಲಿ ಆಗಿದ್ದಾಳೆ. ಮಕ್ಕಳಿಲ್ಲದವರಿಗೆ ಮಕ್ಕಳು ಕೊಟ್ಟಿದ್ದಾಳೆ. ಅದೇಷ್ಟೋ ಭಕ್ತರಿಗೆ ಮನೆ ಸಮಸ್ಯೆ ಸೇರಿ ಆರೋಗ್ಯ ಸಮಸ್ಯೆಯಿಂದ ಪಾರು ಮಾಡಿದ್ದಾಳೆ. ತಮ್ಮ ಬೇಡಿಕೆ ಪೂರ್ಣಗೊಂಡ ಬಳಿಕ ಭಕ್ತರು ದೇವಿಗೆ ಸಾರಾಯಿ, ಸಿಗರೇಟು ಅರ್ಪಿಸುತ್ತಿದ್ದಾರೆ. ಕಳೆದ 26 ವರ್ಷಗಳಿಂದ ಸಂಭ್ರಮದಿಂದ ಜಾತ್ರೆ ಮಾಡುತ್ತಾ ಬಂದಿದ್ದಾರೆ ಎಂದು ಅರ್ಚಕರಾದ ಸತ್ಯಪ್ಪ ಹೇಳಿದ್ದಾರೆ.
ಮಂಗಳಮುಖಿಯಿಂದ ಪೂಜೆ
ಚೌಡೇಶ್ವರಿ ದೇವಸ್ಥಾನದಲ್ಲಿ ಕಳೆದ 26ಕ್ಕೂ ಅಧಿಕ ವರ್ಷಗಳಿಂದ ಮಂಗಳಮುಖಿ ಸತ್ಯಪ್ಪ ಅವರೇ ದೇವಿಯ ಪೂಜೆ ಮಾಡಿಕೊಂಡು ಬಂದಿದ್ದಾರೆ. ದೇವಿಯೇ ನನ್ನ ಇಲ್ಲಿಗೆ ಕರೆದುಕೊಂಡು ಬಂದು ಪ್ರತಿಷ್ಠಾಪನೆ ಆಗಿದ್ದಾಳೆ. ಅಂದಿನಿಂದ ದೇವಿಗೆ ಸೇವೆ ಸಲ್ಲಿಸುತ್ತಿದ್ದೇನೆ. ಭಕ್ತರ ಸಹಾಯದಿಂದ ಇಂದು ದೇವಸ್ಥಾನ ದೊಡ್ಡದಾಗಿ ಬೆಳೆದಿದ್ದು, ನಾಡಿನಾಧ್ಯಂತ ದೇವಿಯ ಕೀರ್ತಿ ಹಬ್ಬಿದೆ ಎಂಬುದು ಸತ್ಯಪ್ಪ ಅವರ ಮಾತು. ಇನ್ನು ರಾಜ್ಯದಲ್ಲಿ ಮಂಗಳಮುಖಿಯಿಂದ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿರುವುದು ಅಪರೂಪ.












Click it and Unblock the Notifications