ದಿ. ಸುರೇಶ್ ಅಂಗಡಿ ಕನಸಿನ ಯೋಜನೆ ಶೀಘ್ರವೇ ಪೂರ್ಣ
ಬೆಳಗಾವಿ, ಮಾರ್ಚ್ 19: ಕುಡಚಿ-ರಾಯಭಾಗ ನಡುವಿನ 17 ಕಿ. ಮೀ. ಜೋಡಿ ಹಳಿ ರೈಲು ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲಿಸಿದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಯೋಜನೆಗೆ ವೇಗ ನೀಡಿದ್ದರು.
ರೈಲ್ವೆ ಸುರಕ್ಷತಾ ಆಯುಕ್ತ ಎ. ಕೆ. ರಾಯ್ ಜೋಡಿ ಹಳಿಯ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಜೊತೆ ವೇಗದ ಪರೀಕ್ಷೆಯನ್ನು ಮಾಡಿದರು. ಎರಡು ಪ್ರಮುಖ ಸೇತುವೆ, 4 ಅಂಡರ್ ಪಾಸಿಂಗ್ ರಸ್ತೆಯನ್ನು ಈ ಮಾರ್ಗ ಒಳಗೊಂಡಿದೆ.
2015-16ರಲ್ಲಿ ಲೋಂಡಾ-ಮೀರಜ್ ನಡುವೆ ಜೋಡಿ ಹಳಿ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿತ್ತು. ಸುಮಾರು 3627 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಇದರ ಭಾಗವಾಗಿಯೇ ಕುಡಚಿ-ರಾಯಭಾಗ ನಡುವೆ ಜೋಡಿ ಹಳಿ ನಿರ್ಮಾಣವಾಗಿದೆ.

ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ ಬಳಿಕ ಕುಡಚಿ-ರಾಯಭಾಗ ನಡುವಿನ ಜೋಡಿಹಳಿಯಲ್ಲಿ ರೈಲಿ ಸಂಚಾರ ಆರಂಭವಾಗಲಿದೆ. ಬೆಂಗಳೂರು-ಮುಂಬೈ ನಡುವಿನ ರೈಲು ಸಂಪರ್ಕ ಸುಧಾರಣೆಗೆ ಈ ಯೋಜನೆ ಸಹಕಾರಿಯಾಗಿದೆ.
ಇದೇ ಯೋಜನೆ ಭಾಗವಾಗಿ ಘಟಪ್ರಭಾ-ಚಿಕ್ಕೋಡಿ ರಸ್ತೆ (16 ಕಿ. ಮೀ), ಚಿಕ್ಕೋಡಿ ರಸ್ತೆ-ರಾಯಭಾಗ (14 ಕಿ. ಮೀ.) ನಡುವೆ ಜೋಡಿ ಮಾರ್ಗ ನಿರ್ಮಾಣ ಮಾಡುವ ಯೋಜನೆ ಈಗಾಗಲೇ ಪ್ರಗತಿಯಲ್ಲಿದೆ.

ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರು ಈ ಯೋಜನೆ ಬಗ್ಗೆ ಆಸಕ್ತ ವಹಿಸಿದ್ದರು. ಯೋಜನೆಗೆ ವೇಗ ನೀಡಿದ್ದರು, ಅವರ ಕನಸಿನ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.












Click it and Unblock the Notifications