Belagavi: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತನ ಬರ್ಬರ ಹತ್ಯೆ, ಕಾರಣವೇನು..?
ಬೆಳಗಾವಿ, ಏಪ್ರಿಲ್ 04: ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಆಪ್ತರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೀಳೆಗಾಂವ್ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಣ್ಣಪ್ಪ ಬಸಪ್ಪ ನಿಂಬಾಳ (58) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.
ಕೊಲೆಯಾದ ಅಣ್ಣಪ್ಪ ಬಸಪ್ಪ ನಿಂಬಾಳ ಅವರು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಆಪ್ತರಾಗಿದ್ದು, ಕೃಷಿ ಪತ್ತಿನ ಸಂಘ ಸಹಕಾರಿ ಅಧ್ಯಕ್ಷರಾಗಿದ್ದರು. ನಿನ್ನೆ ತಡರಾತ್ರಿ( ಏಪ್ರಿಲ್ 03)ರಂದು ಖೀಳೆಗಾಂವ್ ಗ್ರಾಮದ ಹೊರವಲಯದಲ್ಲಿ ಅಣ್ಣಪ್ಪ ಬಸಪ್ಪ ನಿಂಬಾಳ ಅವರ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ಭೀಕರತೆಗೆ ಶಾಸಕ ಲಕ್ಷ್ಮಣ್ ಸವದಿ ಆಪ್ತ ಅಣ್ಣಪ್ಪ ಬಸಪ್ಪ ನಿಂಬಾಳ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆಯ ವಿಚಾರ ತಿಳಿಯುತ್ತಿದ್ದಂತೆ ಅಥಣಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಅಣ್ಣಪ್ಪ ಬಸಪ್ಪ ನಿಂಬಾಳ ಅವರ ಕೊಲೆಗೆ ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ.
ಒಂದು ತಿಂಗಳ ಹಿಂದೆ ಸಂಸದ ಡಾ.ಉಮೇಶ್ ಜಾಧವ್ ಆಪ್ತನ ಕೊಲೆ
ಕಳೆದ ಒಂದು ತಿಂಗಳ ಹಿಂದೆ ಮಾರ್ಚ್ 01ರಂದು ಸಂಸದ ಡಾ. ಉಮೇಶ್ ಜಾಧವ್ ಆಪ್ತ ಹಾಗೂ ಬಿಜೆಪಿ ಮುಖಂಡ ಗಿರೀಶ್ ಚಕ್ರ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ.
ಕಲಬುರಗಿ ಬಿಎಸ್ಎನ್ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿದ್ದ ಗಿರೀಶ್ ಚಕ್ರರನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ ಮಾಡಲಾಗಿತ್ತು. ಸಲಹಾ ಸಮಿತಿ ನಿರ್ದೇಶಕ ನೇಮಕ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವ ನೆಪದಲ್ಲಿ ಗಿರೀಶ್ ಚಕ್ರ ಅವರನ್ನು ಸಾಗನೂರ ಗ್ರಾಮದ ಜಮೀನಿಗೆ ಕರೆಸಲಾಗಿದೆ. ಪರಿಚಿತರ ಕರೆ ಮೇರೆಗೆ ಜಮೀನಿಗೆ ಬಂದ ಗಿರೀಶ್ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.












Click it and Unblock the Notifications