ಬೆಳಗಾವಿ: ಬಯಲಲ್ಲಿ ಕೂತು ಪಾಠ ಕೇಳುತ್ತಿರುವ ಸರ್ಕಾರಿ ಶಾಲೆ ಮಕ್ಕಳು
ಬೆಳಗಾವಿ, ಆಗಸ್ಟ್ 13: ಕೂರಲು ಕೊಠಡಿಗಳಿಲ್ಲದೆ ಮರದ ಕೆಳಗೆ ಬಿಸಿಲು, ಮಳೆಗೆ ಮೈಯೊಡ್ಡಿ ಪಾಠ ಕೇಳುವ ಪರಿಸ್ಥಿತಿ ಬೆಳಗಾವಿಯ ಜಿಲ್ಲೆ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಮಕ್ಕಳದ್ದು.
ಈ ಊರಿನ ಸರ್ಕಾರಿ ಶಾಲೆಯಲ್ಲಿ 171 ಮಕ್ಕಳಿದ್ದಾರೆ ಆದರೆ ಇಲ್ಲಿರುವುದು ಎರಡೇ ಕೊಠಡಿ ಅದರಲ್ಲೊಂದು ಮುಖ್ಯಶಿಕ್ಷಕರ ಕಚೇರಿ. ಇಷ್ಟು ದಿನ ಗ್ರಾಮದ ಮಠದ ಕೊಠಡಿಯಲ್ಲೇ ಪಾಠ ಪ್ರವಚನ ನಡೆಯುತ್ತಿತ್ತು. ಆದರೆ ಶ್ರಾವಣ ಶುರುವಾದ ಬಳಿಕ ಅಲ್ಲಿಂದ ಮಕ್ಕಳು ಹೊರ ಹಾಕಲ್ಪಟ್ಟಿದ್ದಾರೆ.
ಶ್ರಾವಣ ಪ್ರಯುಕತ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾದ ಕಾರಣ, ಮಠದ ಆಡಳಿತ ಮಂಡಳಿ ಮಕ್ಕಳನ್ನು ಕೊಠಡಿಗಳಿಂದ ತೆರವುಗೊಳಿಸಿದೆ ಹಾಗಾಗಿ ಮಕ್ಕಳು ಈಗ ಮರದ ಕೆಳಗೆ ಪಾಠ ಕೇಳುವಂತಾಗಿದೆ.

1 ರಿಂದ 5ನೇ ತರಗತಿ ವರೆಗೂ ಈ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳಿವೆ. ಈಗ ಇರುವ ಎರಡು ಕೊಠಡಿಗಳಲ್ಲಿ ಒಂದರಲ್ಲಿ ಒಂದು ತರಗತಿಗೆ ಪಾಠ ಮಾಡಲಾಗುತ್ತಿದೆ. ಊರಿನ ಸಮುದಾಯಭವನದಲ್ಲಿ ಮತ್ತೊಂದು ತರಗತಿಗೆ ಪಾಠ ನಡೆಯುತ್ತಿದೆ. ಇನ್ನುಳಿದ ತರಗತಿ ವಿದ್ಯಾರ್ಥಿಗಳು ಬಯಲಲ್ಲಿ ಪಾಠ ಕೇಳುತ್ತಿದ್ದಾರೆ.
ಮಕ್ಕಳು ಬಯಲಲ್ಲಿ ಕೂತು ಪಾಠ ಕೇಳುತ್ತಿದ್ದರೂ ಸಹಿತ ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.












Click it and Unblock the Notifications