ಬೆಳಗಾವಿ ಅಧಿವೇಶನ: ಮತಾಂತರ ನಿಷೇಧ ಮಸೂದೆ ಮಂಡನೆಗೆ ಸಿದ್ಧತೆ
ಬೆಳಗಾವಿ, ಡಿಸೆಂಬರ್ 10: ಮುಂಬರಲಿರುವ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆಗೆ ತಯಾರಿ ನಡೆದಿದೆ. ರಾಜ್ಯದಲ್ಲಿ ಮತಾಂತರ ತಡೆಯಲು ರೂಪಿಸಿರುವ ಕಾಯಿದೆ ಜಾರಿ ಸಂಬಂಧ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಸರ್ಕಾರ ಬೆಳಗಾವಿಯ ಅಧಿವೇಶನದಲ್ಲಿ ಮತಾಂತರ ತಡೆಯುವ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸಿದೆ.
ಮತಾಂತರಕ್ಕೆ ನಿಷೇಧ ಹೇರುವ ಮಸೂದೆಯ ಕರಡು ಈಗಾಗಲೇ ಸಿದ್ಧವಾಗಿದ್ದು, ಎರಡೆರೆಡು ಬಾರಿ ಕರಡನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿ ಬೆಳಗಾವಿ ಅಧಿವೇಶನದಲ್ಲಿ ಈ ವಿಧೇಯಕ ಮಂಡಿಸಲು ತಯಾರಿ ನಡೆಸಲಾಗಿದೆ. ಈ ಮತಾಂತರ ನಿಷೇಧ ಕಾಯ್ದೆಯಲ್ಲಿ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದ್ದು, ಮತಾಂತರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಂಶವು ವಿಧೇಯಕದಲ್ಲಿದೆ ಎಂದು ಹೇಳಲಾಗಿದೆ.
ರಾಜ್ಯ ಮಂಡಿಸಲಿರುವ ಮತಾಂತರ ನಿಷೇಧ ವಿಧೇಯಕ ಕೆಲ ಕಠಿಣ ನಿಯಮಗಳನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಅಧಿವೇಶನದಲ್ಲೇ ವಿವಾದಿತ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ತಯಾರಿಗಳನ್ನು ನಡೆಸಲಾಗಿದೆ. ಈ ಮುಂಚೆ ಕೊನೆ ಕ್ಷಣದಲ್ಲಿ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ಧಾರ್ಮಿಕ ಕಟ್ಟಡ (ಸಂರಕ್ಷಣೆ) ವಿಧೇಯಕ 2021ನ್ನು ಮಂಡಿಸಲಾಗಿತ್ತು. ಅದೇ ರೀತಿ ಸರ್ಕಾರ ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ವಿಧೇಯಕ ಮಂಡಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಸೇರಿ 8 ವಿವಿಧ ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆಯನ್ನು ತರಿಸಿ ಶಾಸನ ರಚನೆ ಇಲಾಖೆ ಪರಿಶೀಲನೆ ನಡೆಸಿದೆ. ಕಾನೂನು ಇಲಾಖೆಯೂ ಇತರೆ ರಾಜ್ಯಗಳ ಕಾಯ್ದೆಯಲ್ಲಿನ ಕಾನೂನಾತ್ಮಕ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧೇಯಕದಲ್ಲಿ ಬಲವಂತದ ಮತಾಂತರವನ್ನು ಅಸಿಂಧು ಎಂದು ಘೋಷಿಸಲಾಗುವುದು. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಮತಾಂತರ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಜೊತೆಗೆ ಮತಾಂತರ ಸಿಂಧುವಾಗಲು ಮ್ಯಾಜಿಸ್ಟ್ರೇಟ್‌ಗೆ ನಿಗದಿತ ಕಲಾವಧಿಯ ಮುಂಚೆಯೇ ಮತಾಂತರದ ಉದ್ದೇಶವನ್ನು ಘೋಷಿಸಬೇಕಾದ ಅಂಶವನ್ನೂ ಸೇರಿಸುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಮ್ಯಾಜಿಸ್ಟ್ರೇಟ್ ಮತಾಂತರದ ವಾಸ್ತವ ಉದ್ದೇಶವನ್ನೂ ಅರಿಯಲು ಪೊಲೀಸ್ ತನಿಖೆ ನಡೆಸುವ ಅಂಶವೂ ವಿಧೇಯಕದಲ್ಲಿ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರ್ಕಾರ ಮಂಡಿಸಲಿರುವ ಈ ಮತಾಂತರ ನಿಷೇಧ ವಿಧೇಯಕದಲ್ಲಿ ಬಲವಂತದ ಮತಾಂತರವನ್ನು ಅಸಿಂಧು ಎಂದು ಘೋಷಿಸಲು ಅವಕಾಶವಿದೆ. ಮತಾಂತರ ಸಿಂಧುವಾಗಲು ಮ್ಯಾಜಿಸ್ಟ್ರೇಟ್‌ಗೆ ಮುಂದೆಯೇ ಮತಾಂತರ ಉದ್ದೇಶ ತಿಳಿಸಬೇಕು. ಹಾಗೆಯೇ ಮ್ಯಾಜಿಸ್ಟ್ರೇಟ್ ಅವರು ಮತಾಂತರ ವಾಸ್ತವ ಉದ್ದೇಶವನ್ನರಿಯಲು ಪೊಲೀಸ್ ತನಿಖೆ ನಡೆಸಲು ಅವಕಾಶ ನೀಡುವ ಅಂಶವೂ ವಿಧೇಯಕದಲ್ಲಿದೆ ಎಂದು ಹೇಳಲಾಗಿದೆ.
ಬಲವಂತದ ಮತಾಂತರ ಆಗಿಲ್ಲ ಎಂಬ ಅಂಶವನ್ನು ಸಾಬೀತುಪಡಿಸಬೇಕಾದ ಕಾನೂನನ್ನು ಈ ವಿಧೇಯಕದಲ್ಲಿ ಸೇರಿಸಲಾಗಿದೆ. ಹಾಗೆಯೇ ಬಲವಂತದ ಮತಾಂತರ ಮಾಡಿದವರಿಗೆ 1 ರಿಂದ 5 ವರ್ಷ ಜೈಲು ಶಿಕ್ಷೆ ವಿಧಿಸುವ ಅಂಶವೂ ಈ ಕಾಯ್ದೆಯಲ್ಲಿದೆ.
ಮತಾಂತರ ಮಸೂದೆ ಕಾಯ್ದೆ ಜಾರಿಗೆ ಕ್ರೈಸ್ತ ಸಮುದಾಯದವರು ವಿರೋಧ ವ್ಯಕ್ತಪಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ವಿವಿಧ ಮಠಾಧೀಶರು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಂತೆ ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ಅವರು ಮತಾಂತರ ನಿಷೇಧದ ಖಾಸಗಿ ವಿಧೇಯಕವನ್ನು ಮಂಡಿಸಲು ಸಭಾಪತಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆರ್‌ಎಸ್‌ಎನವರು ಮತಾಂತರ ಮಸೂದೆ ಜಾರಿಮಾಡಲು ಒತ್ತಡ ಹೇರಿದ್ದು, ಬೆಳಗಾವಿ ಅಧೆವೇಶನದಲ್ಲ ಮತಾಂತರ ತಡೆ ಕಾಯ್ದೆ ಮಂಡನೆಯಾಗಿ ಅಂಗೀಕಾರವಾಗುವ ಸಾಧ್ಯತೆಗಳು ಹೆಚ್ಚು.












Click it and Unblock the Notifications