Belagavi Lok Sabha constituency: ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೆ ಬೆಳಗಾವಿ ಕಾಂಗ್ರೆಸ್ ಟಿಕೆಟ್
ಬೆಳಗಾವಿ, ಮಾರ್ಚ್, 21: ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆ ಆಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಮಧ್ಯೆ ಕಾಂಗ್ರೆಸ್ ಕರ್ನಾಟಕ ಒಟ್ಟು 17 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಈ ಪೈಕಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ರವೀಂದ್ರ ಹೆಬ್ಬಾಳ್ಕರ್‌ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.

ಬೆಳಗಾವಿ ಕರ್ನಾಟಕ ಲೋಕಸಭಾ ಕ್ಷೇತ್ರವು ಭಾರತದ ರಾಜಕಾರಣದಲ್ಲಿ ಹೆಸರುವಾಸಿಯಾದ ರಾಜಕೀಯ ಶಕ್ತಿ ಕೇಂದ್ರವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಇದು ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಯಿತು. ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ 3,91,304 ಮತಗಳ ಗೆಲುವಿನ ಅಂತರದಿಂದ ಗೆದ್ದರು. 7,61,991 ಮತಗಳನ್ನು ಗಳಿಸಿದರು.
3,70,687 ಮತಗಳನ್ನು ಪಡೆದ ಐಎನ್‌ಸಿಯ ವಿರೂಪಾಕ್ಷಿ ಎಸ್ ಸಾಧುಣ್ಣವರ್ ಅವರನ್ನು ಸುರೇಶ್ ಅಂಗಡಿ ಸೋಲಿಸಿದರು. ಬೆಳಗಾವಿ ವೈವಿಧ್ಯಮಯ ಜನಸಮೂದಾಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಕರ್ನಾಟಕ ನ ನಿರ್ಣಾಯಕ ಕ್ಷೇತ್ರವಾಗಿ ಉಳಿದಿದೆ. ಈ ಕ್ಷೇತ್ರದಲ್ಲಿ 2019ರಲ್ಲಿ 67.43 ಮತದಾನವಾಗಿದೆ. ಈಗ 2024ರಲ್ಲಿ ಮತದಾರರು ತಮ್ಮ ಮತದ ಶಕ್ತಿಯನ್ನು ತೋರಿಸಲು ಇನ್ನಷ್ಟು ಉತ್ಸುಕರಾಗಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಬೆಳಗಾವಿಯ ಬಿಜೆಪಿ ಟಿಕೆಟ್ ವಿಚಾರದಲ್ಲಿ ಇನ್ನೂ ಸಸ್ಪೆನ್ಸ್ ಮುಂದುವರೆದಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೂ ಬೆಳಗಾವಿಯ ಸ್ಥಳೀಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದರ ನಡುವೆಯೇ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜೋರಾಗಿ ಕೇಳಿಬರುತ್ತಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಇದೀಗ ಕಾಂಗ್ರೆಸ್ ಕಣಕ್ಕಿಳಿಸಿದೆ. ಮೃಣಾಲ್ ಹೆಬ್ಬಾಳ್ಕರ್ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವುದರಿಂದ ಅದೇ ಸಮುದಾಯದ ಯತ್ನಾಳ್ ಅವರನ್ನು ಕಣಕ್ಕಿಳಿಸಲು ಸ್ಥಳೀಯರು ಯೋಚನೆ ನಡೆಸಿದ್ದಾರೆ.
ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದ ಪ್ರಾಬಲ್ಯ ಹೆಚ್ಚಿರುವುದರಿಂದ ಯತ್ನಾಳ್ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರಿದ್ದಾರೆ.












Click it and Unblock the Notifications