ಕಿತ್ತೂರು ಉತ್ಸವ-2024ಕ್ಕೆ ಅದ್ಧೂರಿ ಚಾಲನೆ: ಜನಮನ ಸೆಳೆದ ವಿಶೇಷ ಮೆರವಣಿಗೆ
ಬೆಳಗಾವಿ, ಅಕ್ಟೋಬರ್ 23: ಕಪ್ಪ ಕೇಳಿದ ಬ್ರಿಟೀಷರ ವಿರುದ್ಧ ರಣಕಹಳೆ ಮೊಳಗಿಸಿ ವಿಜಯ ದುಂದುಭಿ ಮೊಳಗಿಸಿದ ವೀರ ರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ 200ನೇ ವಿಜಯೋತ್ಸವ ಮತ್ತು ಕಿತ್ತೂರು ಉತ್ಸವ-2024ಕ್ಕೆ ನಗರದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಕಿತ್ತೂರಿನ ಜನ ಬಹುದಿನದಿಂದ ಕಾದಿದ್ದ ಬೃಹತ್ ಉತ್ಸವಕ್ಕೆ ಚಾಲನೆ ಸಿಕ್ಕಿದೆ.
ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸಿ ತಂದ ವೀರ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಚನ್ನಮ್ಮನ ಕಿತ್ತೂರಿನ ಚನ್ನಮ್ಮನ ವೃತ್ತದಲ್ಲಿ ಬರಮಾಡಿಕೊಂಡು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಸೇರಿದಂತೆ ಎಲ್ಲ ಗಣ್ಯರು ಪುಷ್ಪಾಲಂಕೃತ ಅಶ್ವಾರೂಢ ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿದರು.

ಚನ್ನಮ್ಮನ ಕಿತ್ತೂರಿನ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಅಮಟೂರ ಬಾಳಪ್ಪ ಮತ್ತು ಶೂರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿಗಳಿಗೆ ಕೂಡ ಗಣ್ಯರು ಮಾಲಾರ್ಪಣೆ ಮಾಡಿದರು. ಈ ವೇಳೆ ಸಾವಿರಾರು ಮಂದಿ ನೆರೆದಿದ್ದು, ತಮ್ಮ ಜಿಲ್ಲೆಯ ಅತಿದೊಡ್ಡ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.
ಜನಾಕರ್ಷಿಸಿದ ಜಾನಪದ ಕಲಾವಾಹಿನಿ
200ನೇ ವಿಜಯೋತ್ಸವ ಮತ್ತು ಕಿತ್ತೂರು ಉತ್ಸವ-2024ರ ಅಂಗವಾಗಿ ಆಯೋಜಿಸಲಾಗಿದ್ದ ಆಕರ್ಷಕ ಜಾನಪದ ಕಲಾವಾಹಿನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು. ಕಿತ್ತೂರು ಚನ್ನಮ್ಮ ವೃತ್ತದಿಂದ ಆರಂಭಗೊಂಡ ಜಾನಪದ ಕಲಾವಾಹಿನಿಯು ನಿಚ್ಚಣಿಕಿ ಮಠದ ಆವರಣದವರೆಗೆ ಸಂಚರಿಸಿತು.

ಚಿಟ್ಟಿಮೇಳ, ಮಹಿಳಾ ವೀರಗಾಸೆ, ಈಶ್ವರ ವೇಷ, ಗಾರುಡಿ ಗೊಂಬೆ, ಮೀನು ನೃತ್ಯ, ಮಹಿಳಾ ಡೊಳ್ಳು ಕುಣಿತ, ಚೆಂಡೆವಾದ್ಯ, ಕುದುರೆ ಕುಣಿತ, ಕಂಸಾಳೆ, ನಂದಿಧ್ವಜ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ಕರಡಿಮಜಲು, ಕಂಸಾಳೆ, ಜಗ್ಗಲಗಿ ಸೇರಿದಂತೆ ವಿವಿಧ ಪ್ರಕಾರಗಳ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಜನಮನ ಆಕರ್ಷಿಸಿದವು.
ಇವುಗಳಲ್ಲದೇ ವಿವಿಧ ಇಲಾಖೆಗಳ ಸ್ತಬ್ಥಚಿತ್ರಗಳು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು ಸರ್ಕಾರದ ವಿವಿಧ ಯೋಜನೆಗಳು, ಸೇವಾ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿದವು. ನಂತರ ಫಲಪುಷ್ಪ ಪ್ರದರ್ಶನ ಮತ್ತು ವಸ್ತುಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಾಯಿತು.
ಕಿತ್ತೂರು ಉತ್ಸವ-2024ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್(ರಾಜು) ಸೇಠ್, ವಿಧಾನಪರಿಷತ್ ಸದಸ್ಯ ಚನ್ಮರಾಜ ಹಟ್ಟಿಹೊಳಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಿತ್ತೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications