ಯತ್ನಾಳ್ ಕೋರ್ ಕಮಿಟಿ ಸದಸ್ಯನೂ ಅಲ್ಲ..ರಾಜ್ಯ ನಾಯಕನೂ ಅಲ್ಲ-ಅರುಣ್ ಸಿಂಗ್
ಬೆಳಗಾವಿ, ಅಕ್ಟೋಬರ್ 17 : "ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಇದರಲ್ಲಿ ಸಿಎಂ ಅವರದೇ ಪರಮಾಧಿಕಾರ," ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.
ಬೆಳಗಾವಿಯ ಚಿಕ್ಕೋಡಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದ್ದು, 18 ರಾಜ್ಯಗಳಲ್ಲಿ ಸರಕಾರವಿದೆ. ಪಕ್ಷಕ್ಕೆ ಸಂಬಂಧಿಸಿ ರಾಜ್ಯ- ಕೇಂದ್ರೀಯ ಚುನಾವಣಾ ಸಮಿತಿಗಳೂ ಇವೆ. ಅಭ್ಯರ್ಥಿ ಆಯ್ಕೆಯಂಥ ವಿಚಾರದಲ್ಲಿ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಚುನಾವಣಾ ಅಧಿಸೂಚನೆ ಹೊರಬಿದ್ದಾಗ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ," ಎಂದರು.
"ಬಿಜೆಪಿ ಸರ್ಕಾರದ ಶಾಸಕರಾಗಿ ಬಿಜೆಪಿ ಪಕ್ಷದ ವಿರುದ್ಧವೇ ಆಗಾಗಾ ಕಿಡಿಕಾರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅರುಣ್ ಸಿಂಗ್, ಶಾಸಕ ಯತ್ನಾಳ್ ಕೋರ್ ಕಮಿಟಿ ಸದಸ್ಯನೂ ಅಲ್ಲ ರಾಜ್ಯ ನಾಯಕನೂ ಅಲ್ಲ. ಅವರೊಬ್ಬರು ಶಾಸಕರು. ಈ ಬಗ್ಗೆ ಕ್ರಮ ಕೈಗೊಳ್ಳೋಣ," ಎಂದು ಹೇಳಿದರು.

ಮಾತು ಮುಂದುವರಿಸಿದ ಅರುಣ್ ಸಿಂಗ್, "ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಇಂದು ಸಮ್ಮಾನ ನಿಧಿ ಬಿಡುಗಡೆಯಾಗಿದೆ. ರಾಜ್ಯದ ಲಕ್ಷಾಂತರ ಮತ್ತು ದೇಶದ ಕೋಟ್ಯಂತರ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅರ್ಹ ರೈತರಿಗೆ ತಲಾ 10 ಸಾವಿರ ರೂಪಾಯಿ ಸಿಗುತ್ತಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಈ ಹಣ ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತಿದೆ," ಎನ್ನುವ ಮಾಹಿತಿ ನೀಡಿದರು.
ಇನ್ನು "ಬಡವರ ಮನೆಗಳಲ್ಲಿ ಹಲವು ದಶಕಗಳಲ್ಲಿ ಗ್ಯಾಸ್ ಸಂಪರ್ಕ ಇರಲಿಲ್ಲ. ಮೋದಿಜಿ ಗ್ಯಾಸ್ ಸಂಪರ್ಕ ಕೊಡುವ ಕಾರ್ಯ ಮಾಡಿದ್ದು, ಮಹಿಳೆಯರಿಗೆ ಇದರಿಂದ ಸಂತಸವಾಗಿದೆ. ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡ ಫಲಾನುಭವಿಗಳು ಪ್ರಧಾನಿಗೆ ಧನ್ಯವಾದ ಹೇಳುತ್ತಿದ್ದಾರೆ. ಕೋವಿಡ್ ಅವಧಿಯಲ್ಲಿ ಕೋಟಿಗಟ್ಟಲೆ ಜನರಿಗೆ ಉಚಿತ ಪಡಿತರ ನೀಡಿ ಜೀವ ಉಳಿಸುವ ಕಾರ್ಯ ಮಾಡಿದ ಬಿಜೆಪಿಯ ಕೇಂದ್ರ- ರಾಜ್ಯ ಸರಕಾರಕ್ಕೆ ಜನರು ಕೃತಜ್ಞತೆ ಹೇಳುತ್ತಿದ್ದಾರೆ. ಹೀಗಾಗಿ ಚಿಕ್ಕೋಡಿ ಮತ್ತು ಈ ಭಾಗದಲ್ಲಿ ಜನರು ಬಿಜೆಪಿ ಶಾಸಕರನ್ನೇ ಚುನಾಯಿಸುವ ದಿನ ಬಂದಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಕಾಂಗ್ರೆಸ್ ಪಕ್ಷವು ಜನರಿಗೆ ಕೇವಲ ವಿಶ್ವಾಸಘಾತುಕತನದ ಕೆಲಸ ಮಾಡಿತ್ತು. ಆದ್ದರಿಂದ ಅವರಿಗೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಫಲಾನುಭವಿಗಳ ಜೊತೆ ಅವರಿಗೆ ಮಾತನಾಡುವ ಧೈರ್ಯ ಇರಲಿಲ್ಲ. ಗ್ಯಾಸ್ ಸಂಪರ್ಕ, ಆಯುಷ್ಮಾನ್ ಯೋಜನೆ, ಕಿಸಾನ್ ಸಮ್ಮಾನ್ ನಿಧಿಯಂಥ ಜನೋಪಯೋಗಿ ಕಾರ್ಯಗಳನ್ನು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಯಾಕೆ ಅನುಷ್ಠಾನ ಮಾಡಿಲ್ಲ ಎಂದು ಪ್ರಶ್ನಿಸುವ ಕಾಲ ಬಂದಿದೆ" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.












Click it and Unblock the Notifications