ಕುಂದಾ ನಗರಿ ಜನರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಬೆಳಗಾವಿ, ಜುಲೈ 11; ಕುಂದಾ ನಗರಿ ಬೆಳಗಾವಿಯ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ230 ಕೋಟಿ ರೂ. ವೆಚ್ಚದಲ್ಲಿ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಕೊಡಲಾಗಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಬೆಳಗಾವಿ ವಿಮಾನ ನಿಲ್ದಾಣದಲ್ಲಿ 20,000 ಚ. ಮೀ. ವಿಸ್ತೀರ್ಣದ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಬೆಳಗಾವಿಯ ಸಂಸದೆ ಮಂಗಲ ಸುರೇಶ್ ಅಂಗಡಿ ಈ ಕುರಿತು ಫೇಸ್‌ಬುಕ್ ಮೂಲಕ ಮಾಹಿತಿ ನೀಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಸಂಸದರು, 'ಈ ಯೋಜನೆಗೆ ಮಂಜೂರಾತಿ ನೀಡಿದ ಗೌರವಾನ್ವಿತ ಪ್ರಧಾನಮಂತ್ರಿಳಾದ ಶ್ರೀ ನರೇಂದ್ರ ಮೋದಿ ಜೀ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಜೀ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಮನಃಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದು ಹೇಳಿದ್ದಾರೆ.
36 ತಿಂಗಳಿನಲ್ಲಿ ಕೆಲಸ ಪೂರ್ಣ; ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ದಿನಕ್ಕೆ 1400 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ (700 ಆಗಮನ + 700 ನಿರ್ಗಮನ). ಪ್ರಯಾಣಿಕರಿಗೆ ಬೋರ್ಡಿಂಗ್ ಮಾಡಲು 3 ಸೇತುವೆಗಳನ್ನು ಒಳಗೊಂಡಿದೆ. ಈ ಯೋಜನೆಯು 36 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದ್ದು, ಇದು ಖಂಡಿತವಾಗಿಯೂ ನಮ್ಮ ಭಾಗದ ನಾಗರಿಕರಿಗೆ ವರದಾನವಾಗಲಿದೆ ಮತ್ತು ಮುಂದಿನ ದಿನಗಳಲ್ಲಿ ಬೆಳಗಾವಿಯಿಂದ ವಿವಿಧ ಸ್ಥಳಗಳಿಗೆ ವಿಮಾನಗಳ ಹಾರಾಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಸಂಸದರು ಹೇಳಿದ್ದಾರೆ.
ಬೆಳಗಾವಿ ನಗರದಿಂದ 10 ಕಿ. ಮೀ. ದೂರದ ಸಾಂಬ್ರಾದಲ್ಲಿ ವಿಮಾನ ನಿಲ್ದಾಣವಿದೆ. ಇದು ಕರ್ನಾಟಕ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾದ ಜನರಿಗೆ ಸಹ ಸಹಕಾರಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಮಾನ ನಿಲ್ದಾಣವಿದು.
ಕೋವಿಡ್ ಪರಿಸ್ಥಿತಿಯಲ್ಲಿಯೂ ಬೆಳಗಾವಿ ವಿಮಾನ ನಿಲ್ದಾಣ ತನ್ನ ಸೇವೆ ಮೂಲಕ ಗಮನ ಸೆಳೆದಿದೆ. ಮೇ 25 ರಿಂದ ಜುಲೈ 31ರ ತನಕ (ಒಟ್ಟು 68) ದಿನಗಳಲ್ಲಿ 25,300 ಪ್ರಯಾಣಿಕರು ಬೆಳಗಾವಿಗೆ ಆಗಮಿಸಿದ್ದರು. 855 ವಿಮಾನಗಳು ಆಗಮನ/ ನಿರ್ಗಮನ ಕಾರ್ಯಾಚರಣೆ ನಡೆಸಿದ್ದವು.
2017-18ರಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ 1.22 ಲಕ್ಷ ಪ್ರಯಾಣಿಕರು ಆಗಮಿಸಿದ್ದರು. ಅದೇ 2019-20ರಲ್ಲಿ 1.99 ಲಕ್ಷಕ್ಕೆ ಏರಿಕೆಯಾಗಿತ್ತು. ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು ಸೇರಿ ಕರ್ನಾಟಕದ ಮತ್ತು ದೇಶದ ವಿವಿಧ ನಗರಗಳನ್ನು ಬೆಳಗಾವಿ ವಿಮಾನ ನಿಲ್ದಾಣ ಸಂಪರ್ಕಿಸುತ್ತದೆ.
ಪ್ರಸ್ತುತ ಬೆಳಗಾವಿ ವಿಮಾನ ನಿಲ್ದಾಣದ ಪೀಕ್ ಅವರ್ ಸಾಮರ್ಥ್ಯ 150. ಅಂದರೆ ಒಂದು ಗಂಟೆಯಲ್ಲಿ 150 ಪ್ರಯಾಣಿಕರು ಬಂದಿಳಿಯಬಹುದು ಅಷ್ಟೇ ಪ್ರಯಾಣಿಕರು ಸಂಚಾರ ನಡೆಸಬಹುದು. ಮುಂದಿನ 5 ವರ್ಷಗಳಲ್ಲಿ ಉಂಟಾಗುವ ವಿಮಾನದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿತ್ತು.
ಉಡಾನ್ ಯೋಜನೆ ಆರಂಭವಾದ ಬಳಿಕ ಜನರ ವಿಮಾನದ ಬಳಕೆ ಹೆಚ್ಚಾಗಿದೆ. ಬೆಳಗಾವಿ ವಿಮಾನ ನಿಲ್ದಾಣವೂ ಉಡಾನ್ ಯೋಜನೆಯಡಿ ಸೇರ್ಪಡೆಗೊಂಡಿದೆ. ರಾತ್ರಿ ವೇಳೆಯೂ ವಿಮಾನ ಲ್ಯಾಂಡ್ ಆಗುವ ವ್ಯವಸ್ಥೆಯನ್ನು ಈ ವಿಮಾನ ನಿಲ್ದಾಣ ಹೊಂದಿದೆ. ದಿನದ 3 ಅವಧಿ ಕಾರ್ಯ ನಿರ್ವಹಣೆ ಮಾಡಿದರೆ ನಿಲ್ದಾಣ ದಿನಕ್ಕೆ ಸದ್ಯ 60 ವಿಮಾನ ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಈಗ ಇರುವ ಟರ್ಮಿನಲ್ ಅನ್ನು 2017ರ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆ ಮಾಡಲಾಯಿತು. ಇದು ಎರಡು ಬ್ಯಾಗೇಜ್ ಕನ್ವೇಯರ್ ಬೆಲ್ಟ್‌ಗಳು ಮತ್ತು ಆರು ಚೆಕ್ ಇನ್ ಕೌಂಟರ್‌ಗಳನ್ನು ಹೊಂದಿದೆ. ಮೂರು ಏರ್ ಬಸ್ ಎ320 ಮತ್ತು ಬೋಯಿಂಗ್ 737 ವಿಮಾನಗಳ ನಿಲುಗಡೆ ಏಫ್ರನ್ ಹೊಂದಿದೆ.












Click it and Unblock the Notifications