Belagavi: ಹಸಿರು ಬಣ್ಣಕ್ಕೆ ತಿರುಗಿದ ನೀರು- ಬೆಳಗಾವಿಯಲ್ಲಿ 41 ಜನ ಅಸ್ವಸ್ಥ
ಬೆಳಗಾವಿ ಆಗಸ್ಟ್ 13: ಬೋರ್‌ವೆಲ್ ನೀರು ಸೇವಿಸಿ 41 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಜ್ವರ, ವಾಂತಿ, ಭೇದಿಯಿಂದ ಜನ ಬಳಸುತ್ತಿದ್ದು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ಸವದತ್ತಿ ತಾಲೂಕಿನಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು ಜನರಲ್ಲಿ ಆತಂಕ ಶುರುವಾಗಿದೆ.
ವೀರಭದ್ರೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸಮಸ್ಯೆ ಉಲ್ಬಣವಾಗಿದೆ. ಮಳೆಯಿಂದಾಗಿ ನೀರು ಕಲುಷಿತಗೊಳ್ಳುತ್ತಿದ್ದು ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಈ ನೀರು ಕುಡಿದ ಜನರಿಗೆ ನಿಶಕ್ತಿ ಕಾಡುತ್ತಿದೆ. ಆಸ್ಪತ್ರೆಗೆ ದಾಖಲಾದ 41 ಜನರ ಪೈಕಿ ಮೂರು ಜನರ ಸ್ಥಿತಿ ಚಿಂತಾಜನಕವಾಗಿದೆ. ಇವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಹಾಗೂ ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾವುದೇ ಪ್ರಾಣಹಾನಿಯಾಗಿಲ್ಲ. ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ಮುಂದುವರೆಯುತ್ತಿದೆ. ಹೀಗಾಗಿ ಜನರಿಗೆ ನೀರು ಸೇವನೆಗೂ ಮುನ್ನ ಎಚ್ಚರಿಕೆ ವಹಿಸಲು ವೈದ್ಯರು ಸೂಚಿಸಿದ್ದಾರೆ. ನೀರನ್ನು ಕುಡಿಯುವ ಮುನ್ನ ಚೆನ್ನಾಗಿ ಕುದಿಸಿ ಆರಿಸಿ ಕುಡಿಯುವಂತೆ ವೈದ್ಯರ ಸಲಹೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸವದತ್ತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಯಶವಂತ ಕುಮಾರ್ ಮಾತನಾಡಿ, ಸಮಸ್ಯೆ ಉಲ್ಬಣವಾಗುತ್ತಿದ್ದಂತೆ ಎಚ್ಚರಿಕೆ ಕ್ರಮವಹಿಸಲಾಗಿದೆ. ಬೋರ್‌ವೆಲ್‌ಗಳ ಗ್ರಾಮದ ನೀರನ್ನು ತಪಾಸಣೆಗೆ ಕಳುಹಿಸಲಾಗಿದೆ. ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗಿದೆ ಎಂದರು.
ಸದ್ಯ ವೀರಭದ್ರೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸಮಸ್ಯೆ ಉಲ್ಬಣವಾಗಿದೆ. ಇಲ್ಲಿನ ಸ್ಥಳೀಯರ ಪ್ರಕಾರ ಬೋರ್‌ವೆಲ್ ನೀರನ್ನು ಓವರ್‌ಹೆಡ್ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಅದರಿಂದ ಪೈಪ್‌ಲೈನ್ ಮೂಲಕ ಮನೆ ಮನೆಗಳಿಗೆ ನೀರು ಹರಿಸಲಾಗುತ್ತದೆ. ಆದರೆ ಪೈಪ್‌ಲೈನ್ ಮೂಲಕ ಹರಿಸುವ ನೀರಿನಲ್ಲಿ ಚರಂಡಿ ನೀರು ಸೇರಿಕೊಂಡು ಈ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.
ಈ ಸಮಸ್ಯೆ ಬಗೆಹರಿಸಲು ಟ್ಯಾಂಕರ್ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಸ್ವಚ್ಚಗೊಳಿಸಿ ನಂತರ ಅದನ್ನು ಚೆನ್ನಾಗಿ ಒಣಗಿಸಿದ ಬಳಿಕ ಪುನ: ನೀರು ತುಂಬಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಪೈಪ್‌ಲೈನ್ ಕೂಡ ಸ್ವಚ್ಚಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಸ್ವಚ್ಚಗೊಳಿಸಿದ ಬಳಿಕ ನೀರನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿ ನಂತರ ನೀರನ್ನು ಗ್ರಾಮಗಳಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಈ ಹಿಂದೆಯೇ ಗ್ರಾಮಸ್ಥರು ಕಲುಷಿತ ನೀರಿನ ಬಗ್ಗೆ ಮಾಹಿತಿ ನೀಡಿದ್ದರು ಸಂಬಂಧಪಟ್ಟ ಅಧಿಕಾರಿಗಳು ತಲೆ ಕಡೆಸಿಕೊಂಡಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಗ್ರಾಮದಲ್ಲಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದರಿಂದ ಸಮಸ್ಯೆ ಉಲ್ಬಣವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು ಇದ್ದರೂ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ನಿತ್ರಾಣಗೊಂಡಿರುವ ಈರವ್ವ ಗಾಳಿಮಠ ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದ್ದರೆ, ಇನ್ನಿಬ್ಬರನ್ನು ಒಳರೋಗಿಗಳಾಗಿ ದಾಖಲಿಸಲಾಗಿದೆ. ಉಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications