ಯುವ ಸಮಸ್ಯೆಗಳ ಕುರಿತ ಮರ್ಯಾದೆ ಪ್ರಶ್ನೆ ನಾಟಕ
ಬೆಂಗಳೂರು, ಮಾ.19: ರಂಗಾಸಕ್ತರಿಗೆ ರಂಗ ಶಂಕರ ದ ಪರಿಚಯ ಮಾಡಿಕೊಡಬೇಕಾಗಿಲ್ಲ. ..! ಕಳೆದ ಹತ್ತುವರ್ಷಗಳಿಂದ ಬೆಂಗಳೂರಿನ ನಾಟಕದ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ರಂಗ ಶಂಕರ. ರಂಗ ಪ್ರಯೋಗಗಳಿಗೆ ಸ್ಥಳಾವಕಾಶ ಮಾಡಿಕೊಡುವುದಲ್ಲದೇ ತನ್ನ ಸ್ವತಂತ್ರ ರಂಗ ಪ್ರಯೋಗಗಳನ್ನೂ ಪ್ರಸ್ತುತ ಪಡಿಸುತ್ತಾ ಬಂದಿದೆ.
ಗೋತೆ ಇನ್ಸ್ಟಿಟ್ಯೂಟ್ ನ ಸಹಯೋಗದೊಂದಿಗೆ ರಂಗ ಶಂಕರ ಪ್ರಸ್ತುತ ಪಡಿಸಿದ ನಾಟಕ, 'ಮರ್ಯಾದೆ ಪ್ರಶ್ನೆ' ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮೊದಲ ಪ್ರಯೋಗ ಕಂಡಿತು. ಈ ನಾಟಕ ಯುವ ಪೀಳಿಗೆಯ ಮನಸಿನ ತೊಳಲಾಟಗಳನ್ನು ಮತ್ತು ಸಮಾಜದ ಮೌಲ್ಯಗಳು ಅವರ ಮೇಲೆ ಬೀರುವ ಪರಿಣಾಮಗಳನ್ನು ಮತ್ತು ಅವರ ಆಸೆ ಹಂಬಲ, ಆಕಾಂಕ್ಷೆ, ತಲ್ಲಣ, ಪ್ರೀತಿ ಪ್ರೇಮಗಳನ್ನು ಬಿಂಬಿಸುವ ನಾಟಕವಾಗಿದೆ.

ಜರ್ಮನ್ ಮೂಲದ ನಾಟಕಕಾರ ಲ್ಯುಟ್ಸ್ ಹ್ಯುಬ್ನರ್ ರಚಿಸಿದ ಈ ನಾಟಕವನ್ನು ಎಸ್. ಸುರೇಂದ್ರನಾಥ್ ಕನ್ನಡಕ್ಕೆ ತಂದು ನಿರ್ದೇಶಿಸಿದ್ದಾರೆ. ಈ ನಾಟಕದ ಪ್ರದರ್ಶನ ಶುಕ್ರವಾರ, ಮಾರ್ಚ್ 20 ಮತ್ತು ಶನಿವಾರ, ಮಾರ್ಚ್ 21 ರಂದು ರಂಗ ಶಂಕರದಲ್ಲಿ ನಡೆಯಲಿದೆ.

ಜರ್ಮನಿಯ ಲ್ಯುಟ್ಸ್ ಹ್ಯುಬ್ನರ್ ರವರು, ಯುವಕರ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ನಾಟಕ ರಚಿಸುವವರಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ . ಅವರ ಹಲವಾರು ನಾಟಕಗಳಲ್ಲಿ RESPECT ಒಂದು ಮುಖ್ಯ ನಾಟಕ . ಅದರ ಕನ್ನಡ ಅವತರಣಿಕೆಯೇ ಮರ್ಯಾದೆ ಪ್ರಶ್ನೆ. ಯುವ ಸಮಸ್ಯೆಗಳ ಕುರಿತಾದ ರಂಗಶಂಕರದ ಮೊದಲ ಪ್ರಯೋಗವಿದು .
ನಾಟಕದ ವಿವರ:
ನಾಲ್ವರು ಕಾಲೇಜು ಯುವಕರು (ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು) ಒಂದು ಜಾಲಿ ಡ್ರೈವ್ ಗೆಂದು ಮೈಸೂರಿಗೆ ಹೋಗುತ್ತಾರೆ. ಮಾರ್ಗ ಮಧ್ಯೆ ಸಂಬಂಧಗಳು ಏರುಪೇರಾಗುತ್ತವೆ, ಗೆಳೆತನ ಹಳಸುತ್ತದೆ, ಅನುಮಾನ ಕಾಡುತ್ತದೆ, ಸಿಟ್ಟು, ಸೆಡವು, ಅಹಂ ಪೈಪೋಟಿಯಲ್ಲಿ ಎದುರಾಗುತ್ತವೆ. ಖುಷಿ ಕೊಡಬೇಕಾಗಿದ್ದ ಒಂದು ಟ್ರಿಪ್ ದುರಂತದಲ್ಲಿ ಕೊನೆಗೊಳ್ಳುತ್ತದೆ.

ಈ ತೊಂಬತ್ತು ನಿಮಿಷಗಳಲ್ಲಿ ಯುವ ಪೀಳಿಗೆಯನ್ನು ಕಾಡುವ ಸಮಸ್ಯೆ, ತಲ್ಲಣಗಳನ್ನು ತೆರೆದಿಡುವ ನಾಟಕ, ಇಂದಿನ ಯುವಕರು ಎದುರಿಸುವ ಸಮಸ್ಯೆಗಳು, ಆ ಸಮಸ್ಯೆಗಳಿಗೆ ಅವರೇ ಹುಡುಕಿಕೊಳ್ಳುವ ಪರಿಹಾರಗಳು, ಅವರ ದಿಕ್ಕು ತಪ್ಪಿಸುವ ಸಮಾಜದ ಪೊಳ್ಳು ಮೌಲ್ಯಗಳನ್ನು ಬಿಂಬಿಸುತ್ತದೆ.
ಮರ್ಯಾದೆ ಪ್ರಶ್ನೆ
ರಚನೆ ಮೂಲ : ಜರ್ಮನ್ ಮೂಲದ ನಾಟಕಕಾರ ಲ್ಯುಟ್ಸ್ ಹ್ಯುಬ್ನರ್
ಕನ್ನಡ ಅನುವಾದ ಮತ್ತು ನಿರ್ದೇಶನ : ಎಸ್.ಸುರೇಂದ್ರನಾಥ್
ಪ್ರಸ್ತುತಿ : ರಂಗ ಶಂಕರ
ಸ್ಥಳ : ರಂಗಶಂಕರ
ದಿನಾಂಕ ಮತ್ತು ಸಮಯ : 20/03/20415 ಸಂಜೆ 7:30 ಕ್ಕೆ
21/03/2015 : ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 7:30 ಕ್ಕೆ
ಟಿಕೆಟ್ ದರ : ರೂ. 100/-
ಟಿಕೆಟ್ ಗಳು www.bookmyshow.com ಹಾಗೂ ರಂಗ ಶಂಕರ ದಲ್ಲಿ ದೊರೆಯುತ್ತವೆ.
ರಂಗ ಶಂಕರ: 99722 55400












Click it and Unblock the Notifications