ರವಿ ಕೇಸ್: ಎಫ್ಎಸ್ಎಲ್ ವರದಿ ಕೇಳಿದ ಸಿಬಿಐ ಟೀಂ
ಬೆಂಗಳೂರು, ಮಾ,29: ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುವ ತಂಡದ ವಿವರ ಈಗ ಪ್ರಕಟವಾಗಿದೆ. ಚೆನ್ನೈ ಸಿಬಿಐ ಘಟಕದ ಡಿಐಜಿ ಸೆಲ್ವರಾಜ್ ಸೆಂಗತ್ತೀರ್ ಹಾಗೂ ವಿಶೇಷ ಬ್ರ್ಯಾಂಚಿನ ಎಸ್ಪಿ ಶರವಣನ್ ಅವರ ನೇತೃತ್ವದ ವಿಶೇಷ ತಂಡ ತನಿಖೆ ನಡೆಸಲಿದೆ.
ಡಿಕೆ ರವಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಕರ್ನಾಟಕ ಸರ್ಕಾರ ಅಧಿಕೃತ ಪತ್ರ ಕಳಿಸಿದ ಮೇಲೆ ಕೇಂದ್ರ ಗೃಹ ಇಲಾಖೆ ಸೂಚನೆ ಮೇರೆಗೆ ಡಿ.ಕೆ.ರವಿ ಪ್ರಕರಣವನ್ನು ಚೆನ್ನೈ ಘಟಕದ ಸಿಬಿಐ ತಂಡ ತನಿಖೆ ಕೈಗೆತ್ತಿಕೊಂಡಿದೆ. ಡಿಐಜಿ ಸೆಲ್ವರಾಜ್ ಸೆಂಗತ್ತೀರ್ ಜತೆಗೆ ಚೆನ್ನೈ ವಿಭಾಗದ ಸಿಬಿಐ ಎಸ್ಪಿ ಸೇರಿ 8 ಅಧಿಕಾರಿಗಳು ಈ ವಿಶೇಷ ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಸಿಬಿಐ ಮೊದಲ ಹೆಜ್ಜೆ:
ಚೆನ್ನೈನ ಸಿಬಿಐ ಕಚೇರಿ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಳ್ಳಲಿದ್ದಾರೆ. ನಂತರ ಬೆಂಗಳೂರಿಗೆ ಆಗಮಿಸಿ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ಸಿಐಡಿ ತಂಡದಿಂದ ಪಡೆದುಕೊಳ್ಳುತ್ತಾರೆ. ಚೆನ್ನೈ ಸಿಬಿಐನ ವಿಶೇಷ ತಂಡ ಬೆಂಗಳೂರು ಸಿಬಿಐ ಘಟಕದ ಸಹಕಾರದೊಂದಿಗೆ ಪ್ರಕರಣದ ತನಿಖೆ ನಡೆಸುತ್ತದೆ ಎಂದು ಬೆಂಗಳೂರು ಸಿಬಿಐ ಘಟಕದ ಮುಖ್ಯಸ್ಥ ರೂಪ್ ಕುಮಾರ್ ದತ್ತಾ ಹೇಳಿದ್ದಾರೆ. [ಸಿಐಡಿ ಮತ್ತು ಸಿಬಿಐ ನಡುವಿನ ವ್ಯತ್ಯಾಸವೇನು?]

ಎಫ್ಎಸ್ಎಲ್ ವರದಿ ಎಲ್ಲಿ?: ಡಿಕೆ ರವಿ ಶವದ ಮರಣೋತ್ತರ ಪರೀಕ್ಷೆ ನಡೆಸಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಪ್ರಾಥಮಿಕ ವರದಿಯನ್ನಷ್ಟೇ ತಯಾರಿಸಿದ್ದಾರೆ. ಅಟೋಪ್ಸಿ ಹಾಗೂ ಎಫ್ ಎಸ್ಎಲ್ ವರದಿ ಇನ್ನೂ ಲಭ್ಯವಾಗಿಲ್ಲ.[ತನಿಖೆ ಸಿಬಿಐಗೆ ಒಪ್ಪಿಸಿದ ರಾಜ್ಯ ಸರ್ಕಾರ]
ರವಿ ದೇಹದ ಮೆದಳು, ಕಿಬ್ಬೊಟ್ಟೆ, ಕರಳು ಸೇರಿದಂತೆ ಕೆಲವು ಅಂಗಗಳ ಪರೀಕ್ಷೆ ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಲಾಗಿದೆ. ಇಲ್ಲಿಂದ ವರದಿ ಬಂದ ಮೇಲೆ ಸಿಬಿಐ ತಂಡ ಮುಂದಿನ ಕ್ರಮ ಕೈಗೊಳ್ಳಲಿದೆ.[ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]
ವಿಚಾರಣೆ: ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು, ಕುಟುಂಬಸ್ಥರಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಿದೆ. ರವಿ ಸಾವಿನಿಂದ ಯಾರಿಗೆ ಲಾಭ, ಕೊಲೆ ಅಥವಾ ಅತ್ಮಹತ್ಯೆ ಹಿಂದಿನ ಉದ್ದೇಶವೇನು ಎಂಬುದನ್ನು ಅರಿಯಲು ಸಿಬಿಐ ಯತ್ನಿಸಲಿದೆ.












Click it and Unblock the Notifications