ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಗೆಲ್ಲೋದು ಗ್ಯಾರಂಟಿ - ಸದಾನಂದಗೌಡ

By ಬಾಲರಾಜ್ ತಂತ್ರಿ
|
Google Oneindia Kannada News

ಮಾಜಿ ಮುಖ್ಯಮಂತ್ರಿ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಸದಾ ಹಸನ್ಮುಖಿ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಅವರ ನಿವಾಸ 'ತೆರೆದಿದೆ ಮನೆ ಓ ಬಾ ಅತಿಥಿ'. ಬೆಳಗ್ಗೆ ಆರು ಗಂಟೆಯಿಂದಲೇ ಜನತಾ ಜನಾರ್ದನನ ಕುಂದು ಕೊರತೆಗಳನ್ನು ಆಲಿಸಲು ಗೌಡ್ರು ರೆಡಿಯಾಗಿರುತ್ತಿದ್ದರು. ಈಗಲೂ ಹಾಗೆ.

ಡಿವಿಎಸ್ ಗೆದ್ದು ಕೇಂದ್ರದಲ್ಲಿ ಬಿಜೆಪಿಯೂ ಅಧಿಕಾರಕ್ಕೆ ಬಂದರೆ ಗೌಡ್ರಿಗೆ ಸಚಿವ ಸ್ಥಾನ ಗ್ಯಾರಂಟಿ ಎನ್ನುವ ವಿಶ್ವಾದಲ್ಲಿರುವ ಕಾರ್ಯಕರ್ತರು ತುಸು ಹೆಚ್ಚು ಹುರುಪಿನಿಂದಲೇ ಪ್ರಚಾರ ನಡೆಸುತ್ತಿದ್ದಾರೆ. ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಮತ್ತು ಬೆಳಗ್ಗೆ 9 ರಿಂದ ರಾತ್ರಿ 12 ಗಂಟೆಯವರೆಗೆ ಅವಿರತ ಪ್ರಚಾರದಲ್ಲಿ ತೊಡಗಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ ನಾರಾಯಣಸ್ವಾಮಿ ಮತ್ತು ಜೆಡಿಎಸ್ ನಿಂದ ಅಬ್ದುಲ್ ಅಜೀಂ ಕಣಕ್ಕಿಳಿದಿದ್ದಾರೆ.

'ಒನ್ ಇಂಡಿಯಾ' ಜೊತೆ ಸದಾನಂದ ಗೌಡರ ಸಂದರ್ಶನದ ಆಯ್ದ ಭಾಗ: [ಬೆಂ. ಉತ್ತರ ಕ್ಷೇತ್ರದ ಕಿರು ಪರಿಚಯ]

ಪ್ರ: ಪುತ್ತೂರು ಮೂಲದವರಾದ ನೀವು, ದಕ್ಷಿಣಕನ್ನಡ ಅಥವಾ ಉಡುಪಿ ಕ್ಷೇತ್ರವನ್ನು ಯಾಕೆ ಆಯ್ಕೆ ಮಾಡಿಕೊಂಡಿಲ್ಲ?

ಡಿವಿಎಸ್: ಕ್ಷೇತ್ರ ಮರುವಿಂಗಡನೆಯ ನಂತರ ಉಡುಪಿ ಚಿಕ್ಕಮಗಳೂರು ಕ್ಷೇತ್ರ ವಿಸ್ತೀರ್ಣದಲ್ಲಿ ವಿಶಾಲವಾದದ್ದು. ಕ್ಷೇತ್ರದ ಎಲ್ಲಾ ಭಾಗಕ್ಕೆ ತೆರಳಿ ಕಾರ್ಯ ನಿರ್ವಹಿಸುವುದು ಕಷ್ಟ. ಇನ್ನು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಸದ್ಯಕ್ಕೆ ಈ ಪ್ರಶ್ನೆ ಅಪ್ರಸ್ತುತ.

Exclusive interview with Bangalore North BJP candidate D V Sadananda Gowda

ಪ್ರ: ನೀವು ಸ್ಥಳೀಯರಲ್ಲ ಎನ್ನುವ ಕೂಗು ಇದೆಯಲ್ಲ ?
ಡಿವಿಎಸ್: ನಾನು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿರುವುದರಿಂದ ನಾನು ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲಿ ಯಾವುದೇ ತಕರಾರು ಇಲ್ಲ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲೂ ಈ ಬಗ್ಗೆ ಮತದಾರರು ಮಾತನಾಡಿಕೊಳ್ಳುತ್ತಿಲ್ಲ. ಇನ್ನೊಂದು ವಿಚಾರ - ಇದು ಸ್ಥಳೀಯ ಚುನಾವಣೆಯಲ್ಲ, ಲೋಕಸಭಾ ಚುನಾವಣೆ

ಪ್ರ: ಚಂದ್ರೇಗೌಡರ ಸಹಕಾರ ನಿಮಗೆ ಸಿಗುತ್ತಿದೆಯಾ? ಅಶೋಕ್ ಬೆಂಬಲ ನೀಡುತ್ತಿದ್ದಾರಾ?
ಡಿವಿಎಸ್: ಚಂದ್ರೇಗೌಡರಿಗೆ ಸಿಗಬೇಕಾಗಿದ್ದ ಮರ್ಯಾದೆ ಸಿಕ್ಕಿಲ್ಲ ಎನ್ನುವ ಮಾತನ್ನು ನಾನು ವಸ್ತುನಿಷ್ಠವಾಗಿ ಒಪ್ಪಿಕೊಳ್ಳುತ್ತೇನೆ, ಇದರಲ್ಲಿ ನನ್ನ ತಪ್ಪಿಲ್ಲ. ಹಲವು ಬಾರಿ ನಾನು ಹೇಳಿದ್ದಂತೆ ಅವರಿಗೆ ಟಿಕೆಟ್ ತಪ್ಪಿಸಿದ್ದು ನಾನಲ್ಲ. ನಾಮಪತ್ರ ಸಲ್ಲಿಸುವ ಮುನ್ನ ಅವರ ಆಶೀರ್ವಾದ ಪಡೆದು ಅವರ ಸಹಕಾರ ಕೋರಿದ್ದೇನೆ. ಮೊನ್ನೆ ನನ್ನ ಹುಟ್ಟುಹಬ್ಬದ ದಿನ ಮನೆಗೆ ಬಂದು ಹೋಗಿ, ಕಾರ್ಯಕರ್ತರಲ್ಲಿ ಮಾತನಾಡಿ ಹೋಗಿದ್ದಾರೆ. ಚಂದ್ರೇಗೌಡರ ಸಂಪೂರ್ಣ ಬೆಂಬಲ ನನಗೆ ಸಿಗುತ್ತಿದೆ. (ಅಶೋಕ್ ಪ್ರಶ್ನೆಗೆ ಉತ್ತರ ನೀಡಲಿಲ್ಲ)

ಪ್ರ: 10 ತಿಂಗಳ ಅವಧಿಯಲ್ಲಿ ಸಿದ್ದು ಸರಕಾರದ ಸಾಧನೆ ಶೂನ್ಯ ಎನ್ನುವ ಮಾತನ್ನು ಹೇಳಿದ್ದೀರಿ. ಹಾಗಿದ್ದರೆ ಅನ್ನಭಾಗ್ಯ, ಶಾದಿಭಾಗ್ಯದಂತಹ ಜನಪ್ರಿಯ ಯೋಜನೆ ಲೆಕ್ಕಕ್ಕಿಲ್ಲವೇ?
ಡಿವಿಎಸ್: ಅನ್ನಭಾಗ್ಯ ಯೋಜನೆಯಲ್ಲಿ ಯಾವ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಇತ್ತೀಚೆಗೆ ಲೋಕಾಯುಕ್ತ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ. ಕೋಟ್ಯಂತರ ರೂಪಾಯಿ ಪೋಲಾಗುತ್ತಿದೆ. ಫಲಾನುಭವಿಗಳಿಗೆ ಯೋಜನೆ ಉಪಯೋಗಕ್ಕೆ ಬರುತ್ತಿಲ್ಲ. ಬಿಜೆಪಿ ಸರಕಾರದಲ್ಲಿ ನಡೆದ ಅಭಿವೃದ್ದಿ ಕೆಲಸಗಳನ್ನು ಸಿದ್ದರಾಮಯ್ಯ ಉದ್ಘಾಟನೆ ಮಾಡುತ್ತಿದ್ದಾರೆ. ಶಾದಿಭಾಗ್ಯ ಯೋಜನೆ ಜಾರಿಗೆ ತಂದು ಬಿದಾಯಿ ಯೋಜನೆಯನ್ನೂ ಘೋಷಿಸುತ್ತಾರೆ. ಏನಿದರರ್ಥ?

ಪ್ರ: ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸದಾನಂದ ಗೌಡರ ಕೊಡುಗೆ ಏನು?
ಡಿವಿಎಸ್: ನನ್ನ ಅವಧಿಯಲ್ಲಿ ಆದ ಅಭಿವೃದ್ದಿ ಕೆಲಸದ ಬಗ್ಗೆ ನಾನು ಯಾವುದೇ ಚರ್ಚೆಗೆ, ಯಾವುದೇ ವೇದಿಕೆಗೆ ಬರಲು ಸಿದ್ದ. ಮೇಲು ಸೇತುವೆ ಯೋಜನೆಗಳಿಗೆ NOC ಪಡೆದುಕೊಂಡಿದ್ದು ನನ್ನ ಅವಧಿಯಲ್ಲಿ. ಕಾವೇರಿ ನಾಲ್ಕನೇ ಹಂತ, ಮೆಟ್ರೋ ಮುಂತಾದ ಪ್ರಮುಖ ಕೆಲಸಗಳು ನನ್ನ ಅವಧಿಯಲ್ಲೇ ಆಂಗೀಕಾರವಾಗಿದ್ದು. ಮಾನ್ಯ ಸಿದ್ದರಾಮಯ್ಯನವರು ಇದನ್ನು ಅರಿತುಕೊಳ್ಳಲಿ.

ಪ್ರ: ಮುತಾಲಿಕ್ ಬಿಜೆಪಿ ಸೇರ್ಪಡೆ ಗೊಂದಲದ ಬಗ್ಗೆ ಏನಂತೀರಿ?
ಡಿವಿಎಸ್: ಪ್ರಮೋದ್ ಮುತಾಲಿಕ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದು ರಾಜ್ಯ ಘಟಕದ ನಿರ್ಧಾರವಾಗಿತ್ತು. ಆಮೇಲೆ ದೆಹಲಿಯಿಂದ ಒತ್ತಡ ಬಂದಿದ್ದರಿಂದ ನಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಂಡೆವು. ಈ ವಿಚಾರದಲ್ಲಿ ಗೊಂದಲ ಇದ್ದಿದ್ದು ನಿಜ, ನಾವು ಎಡವಿದ್ದೂ ನಿಜ.

ಪ್ರ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಗೆಲ್ಲಲು ಜೆಡಿಎಸ್ ತೊಡಕಾಗಬಹುದೇ?
ಡಿವಿಎಸ್: ಶಿವಮೊಗ್ಗ ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿ ನನ್ನಲ್ಲಿ ಇಲ್ಲ. ಆದರೆ ಒಂದಂತೂ ನಿಜ. ಯಡಿಯೂರಪ್ಪ ಗೆಲುವುದು ನಿಶ್ಚಿತ, ಇದರಲ್ಲಿ ಯಾವುದೇ ಸಂದೇಹವಿಲ್ಲ.

ಪ್ರ: ಚಿಕ್ಕಬಳ್ಳಾಪುರದಲ್ಲಿ ಎಚ್ಡಿಕೆ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆಯೇ?
ಡಿವಿಎಸ್: ನಾನು ಇನ್ನೊಂದು ಪಕ್ಷದ ಬಗ್ಗೆ ಮತ್ತು ಅವರ ಚುನಾವಣಾ ತಂತ್ರದ ಬಗ್ಗೆ ಮಾತನಾಡಲು ಹೋಗುವುದಿಲ್ಲ. ನನ್ನ ಈಗಿನ ಮೊದಲ ಆದ್ಯತೆ ಚುನಾವಣೆ ಗೆಲ್ಲುವುದು. ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆ ಇರುವುದನ್ನು ಮಾಧ್ಯಮಗಳ ಮೂಲಕ ಅರಿತು ಕೊಂಡಿದ್ದೇನೆ.

ಪ್ರ: ಆಧಾರ್ ಕಾರ್ಡ್ ಯೋಜನೆಯನ್ನು ಬಿಜಿಪಿ ಅಧಿಕಾರಕ್ಕೆ ಬಂದರೆ ರದ್ದು ಪಡಿಸುತ್ತೇವೆ ಎನ್ನುವ ಮಾತನ್ನು ಬಿಜೆಪಿ ನಾಯಕರು ಆಡಿದ್ದಾರೆ. ಸಾವಿರಾರು ಕೋಟಿ ಸಾರ್ವಜನಿಕರ ದುಡ್ದನ್ನು ಪೋಲು ಮಾಡುವುದು ಸರಿಯೇ?
ಡಿವಿಎಸ್: ಆಧಾರ್ ಯೋಜನೆಯ ತೊಂದರೆಗಳನ್ನು ಸುಪ್ರೀಂಕೋರ್ಟ್ ಬಿಡಿಸಿ ಬಿಡಿಸಿ ಹೇಳಿದೆ. ಇದರಿಂದ ಜನಸಾಮನ್ಯರಿಗೆ ಅನುಕೂಲಕ್ಕಿಂತ, ಅನಾನುಕೂಲವೇ ಜಾಸ್ತಿ.

ಪ್ರ: ವಾರಣಾಸಿ ಫೈಟ್ ಬಗ್ಗೆ ಏನಂತೀರಿ? ಯಾರು ಗೆಲ್ಲಬಹುದು?
ಡಿವಿಎಸ್: (ನಗುತ್ತಾ) ದೇಶಕ್ಕೆ ಈ ಬಗ್ಗೆ ಈ ಸಂದೇಹವಿಲ್ಲ, ನಿಮಗ್ಯಾಕೀ ಸಂದೇಹ?

English summary
Exclusive interview with Bangalore North BJP candidate D V Sadananda Gowda (@DVSBJP)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X