ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ: ಕಾಂಗ್ರೆಸ್ ಶಾಸಕರ ಸ್ಪಷ್ಟನೆ
ಬಳ್ಳಾರಿ, ಜೂನ್ 10: ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿ ದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ರಾಜ್ಯದ 28 ಕ್ಷೇತ್ರಗಳ ಪೈಕಿ 9 ಸೀಟುಗಳಲ್ಲಿ ಜಯಗಳಿಸಿದೆ.
ಚುನಾವಣೆಯಲ್ಲಿ ಬಳ್ಳಾರಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ. ತುಕರಾಂ ಗೆಲುವು ಸಾಧಿಸಿದ್ದಾರೆ. ಅವರು ಸಂಡೂರು ಕ್ಷೇತ್ರದ ಹಾಲಿ ಶಾಸಕರು ಹೌದು. ಈಗ ಅವರು ಲೋಕಸಭೆ, ವಿಧಾನಸಭೆ ಯಾವುದಾರೂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ.

ಸಂಡೂರು ಕ್ಷೇತ್ರದ ಹಾಲಿ ಶಾಸಕರಾಗಿದ್ದರೂ ಸಹ ಇ. ತುಕರಾಂ ಅವರನ್ನು ಕಾಂಗ್ರೆಸ್ ಲೋಕಸಭೆ ಚುನಾವಣೆ ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಅವರು 7,30,845 ಮತಗಳನ್ನು ಪಡೆದು, ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ವಿರುದ್ಧ 98,992 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ: ಇ. ತುಕರಾಂ ರಾಜ್ಯ ರಾಜಕೀಯದಲ್ಲಿ ಉಳಿಯಬೇಕಾದರೆ ಬಳ್ಳಾರಿ ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಗ ಬಳ್ಳಾರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕು.
ರಾಷ್ಟ್ರ ರಾಜಕೀಯಕ್ಕೆ ಹೋಗಬೇಕಾದರೆ ಅವರು ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಗ ಸಂಡೂರು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಇ. ತುಕರಾಂ ರಾಜ್ಯ ರಾಜಕಾರಣದಲ್ಲಿ ಉಳಿಯುತ್ತಾರೆ ಎಂಬ ಸುದ್ದಿ ಹಬ್ಬಿತ್ತು.
"ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಸುದ್ದಿ ಸುಳ್ಳು ಎಂದು ಇ. ತುಕರಾಂ ಸ್ಪಷ್ಟಪಡಿಸಿದ್ದಾರೆ. ನಾನು ನನ್ನ ಕಾರ್ಯಕರ್ತರ, ಅಭಿಮಾನಿಗಳ ಭಾವನೆಗಳಿಗೆ ಬೆಲೆ ನೀಡುತ್ತೇನೆ. ಆದರೆ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಸುದ್ದಿ ಸುಳ್ಳು" ಎಂದರು.
"ಅಖಂಡ ಬಳ್ಳಾರಿಯ ಜನರು ನನೆಗೆ ಬೆಂಬಲವಾಗಿ ನಿಂತು ಗೆಲ್ಲಿಸಿದ್ದಾರೆ. ಜನರ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡಲು ಲೋಕಸಭೆಯಲ್ಲಿ ನಾನು ಧ್ವನಿ ಎತ್ತುತ್ತೇನೆ. ನಾನು ರಾಹುಲ್ ಗಾಂಧಿ ಅವರಿಗೂ ಈ ಕುರಿತು ಮಾತು ಕೊಟ್ಟಿದ್ದೇನೆ" ಎಂದು ಇ. ತುಕರಾಂ ಹೇಳಿದರು.
ಏಕೆ ಬಂತು ಈ ಸುದ್ದಿ?; ಇ. ತುಕರಾಂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕೀಯದಲ್ಲಿ ಉಳಿಯಲಿದ್ದಾರೆ? ಎಂಬ ಸುದ್ದಿ ಏಕೆ ಬಂತು. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಸಹ ರಾಜ್ಯ ರಾಜಕೀಯದಲ್ಲೇ ಉಳಿಯಲು ಕಾರಣವೇನು? ಎಂಬ ಕುತೂಹಲ ಸಹಜ.
ರಾಜ್ಯದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಸುಮಾರು 94.73 ಕೋಟಿ ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಗರಣ ಬೆಳಕಿಗೆ ಬಂದ ಬಳಿಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನವೊಂದು ಖಾಲಿಯಾಗಿದೆ.
ಬಿ. ನಾಗೇಂದ್ರ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಬಿ. ನಾಗೇಂದ್ರ ರಾಜೀನಾಮೆ ಬಳಿಕ ತೆರವಾದ ಸಚಿವ ಸ್ಥಾನವನ್ನು ಬಳ್ಳಾರಿಗೆ ನೀಡಬೇಕು. 4 ಬಾರಿಯ ಶಾಸಕ, ಸಂಡೂರು ಕ್ಷೇತ್ರದ ಇ. ತುಕರಾಂ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದ್ದರಿಂದ ತುಕರಾಂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕೀಯದಲ್ಲಿ ಉಳಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.












Click it and Unblock the Notifications