ಯೋಧನಿಗೆ ಅದ್ದೂರಿ ಸ್ವಾಗತ ಕೋರಿದ ಸೊನ್ನ ಗ್ರಾಮಸ್ಥರು
ಬಳ್ಳಾರಿ, ಜುಲೈ.05: ಭಾರತೀಯ ಅರೆಸೇನಾ ಪಡೆಯಲ್ಲಿ (ಸಿಆರ್ ಪಿಎಫ್) 21 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದ ಯೋಧ ಮೈನಳ್ಳಿ ಮಹೇಶ್ವರ (44) ಅವರಿಗೆ ಹೂವಿನಹಡಗಲಿ ತಾಲೂಕಿನ ಸೊನ್ನ ಗ್ರಾಮದ ಜನರು ಅಭೂತಪೂರ್ವವಾಗಿ ಸ್ವಾಗತಿಸಿ, ಅವರ ಸೇವೆಯನ್ನು ಕೊಂಡಾಡಿದ್ದಾರೆ.
ಸೊನ್ನ ಗ್ರಾಮದ ಹೊರವಲಯದಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೈನಳ್ಳಿ ಮಹೇಶ್ವರ ಅವರನ್ನು ಬ್ಯಾಂಡು, ಭಜಂತ್ರಿ, ಪಟಾಕಿಗಳ ಸದ್ದು, ಗದ್ದಲದ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು.
ಅಷ್ಟೇ ಅಲ್ಲ, ಗ್ರಾಮದ ಯುವಕರು ದ್ವಿಚಕ್ರ ವಾಹಗಳ ರಾಲಿ ನಡೆಸಿ, ಮೆರವಣಿಗೆಗೆ ಮತ್ತಷ್ಟು ಮೆರಗು ತಂದರು. ದಾರಿಯುದ್ದಕ್ಕೂ ಇವರಿಗೆ ಹಾರ, ತುರಾಯಿ, ಶಾಲು ಹಾಕಿ, ಸಿಹಿ ನೀಡಿ, ಶುಭ ಹಾರೈಸಲು ಸಾಕಷ್ಟು ಜನರು ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನರೆದಿದ್ದರು.

ಮೈನಳ್ಳಿ ಮಹೇಶ್ವರ, ಮಾತನಾಡಿ, ದೇಶಾಭಿಮಾನ - ರಾಷ್ಟ್ರಾಭಿಮಾನದ ಸಂಕೇತವಾಗಿ ಗ್ರಾಮಸ್ಥರು ನನ್ನ ಸೇವೆಯನ್ನು ಗೌರವಿಸಿ ಅಭಿನಂದಿಸಿದ್ದಾರೆ. ಅವರ ಪ್ರೀತಿ - ಅಭಿಮಾನಗಳ ಮಧ್ಯೆ 21 ವರ್ಷಗಳ ಸೇವೆಯಲ್ಲಿ ನಾನು ಅನುಭವಿಸಿದ ನೋವು - ಸಂಕಟ, ಎದುರಿಸಿದ ಸವಾಲುಗಳು, ಒಂಟಿತನ, ಇನ್ನಿತರೆಗಳು ಎಲ್ಲವೂ ನೀರಾಗಿ ಕರಗಿದವು. ನಾನು, ಇಡೀ ಗ್ರಾಮಸ್ಥರಿಗೆ ಕೃತಜ್ಞ' ಎಂದರು.

"ನಮ್ಮೂರಿನ ಹುಡುಗ ಇಪ್ಪತ್ತೊಂದು ವರ್ಷ ಅರೆ ಮಿಲಿಟರಿಯಲ್ಲಿ ಕೆಲಸ ಮಾಡಿ, ರಿಟೈರ್ ಆಗಿ ಬಂದಿದ್ದಾನೆ. ಆತನ ಸೇವೆಯನ್ನು ನಾವೆಲ್ಲರೂ ಗೌರವಿಸಿ - ಅಭಿನಂದಿಸಿ ಊರಿನ ಹಬ್ಬವನ್ನು ಆಚರಿಸಿದ್ದೇವೆ. ಖುಷಿ ಆಗುತ್ತಿದೆ. ಆ ಯೋಧ, ನಮ್ಮೂರಿನ ಗೌರವ ಕಳಸ' ಎಂದು ಗ್ರಾಮಸ್ಥರು ಪ್ರಶಂಸಿಸಿದರು.

ಮೈನಳ್ಳಿ ಮಹೇಶ್ವರ (44), 1997ರ ಜುಲೈ ನಲ್ಲಿ ಭಾರತೀಯ ಅರೆಸೇನಾ ಪಡೆಗೆ ಆಯ್ಕೆ ಆಗಿ, ಚೆನ್ನೈನ ಆವಡಿಯ ರಿಕ್ರೂಟ್ ಮೆಂಟ್ ಟ್ರೈನಿಂಗ್ ಸೆಂಟರ್ - 2'ಯಲ್ಲಿ ತರಬೇತಿ ಪಡೆದು ತ್ರಿಪುರಾ, ಛತ್ತೀಸ್ ಗಢ್, ಅಹ್ಮದಾಬಾದ್, ಭದ್ರಾಚಲಂ, ಕಾಶ್ಮೀರ - ಜಮ್ಮು ಇನ್ನಿತರೆಡೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿದ್ದಾರೆ.












Click it and Unblock the Notifications