ಆ.20ಕ್ಕೆ ವಿಶ್ವವಿಖ್ಯಾತ ಹಂಪಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ
ವಿಜಯನಗರ, ಆಗಸ್ಟ್ 18: ಇದೇ ಆಗಸ್ಟ್ 20 ಮತ್ತು 21 ರಂದು ತುಂಗಭದ್ರಾ ಜಲಾಶಯ ಮತ್ತು ಐತಿಹಾಸಿಕ ಹಂಪಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ನೀಡಲಿದ್ದಾರೆ. ಗಣ್ಯರ ಭೇಟಿ ಹಿನ್ನೆಲೆ ಬರಮಾಡಿಕೊಳ್ಳಲು ಹಂಪಿಯಲ್ಲಿ ಪೂರ್ವ ಸಿದ್ಧತಾ ಕಾರ್ಯ ಜೋರಾಗಿ ನಡೆಯುತ್ತಿದೆ.
ಆಗಸ್ಟ್ 20 ರಂದು ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊಸಪೇಟೆ ನಗರದ ತಾಲೂಕು ಕ್ರೀಡಾಂಗಣಕ್ಕೆ ಸಂಜೆ 5.20ಕ್ಕೆ ಕುಟುಂಬ ಸಮೇತರಾಗಿ ಆಗಮಿಸಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಳಿಕ ತುಂಗಭದ್ರಾ ಜಲಾಶಯ ವೀಕ್ಷಿಸಲಿದ್ದಾರೆ. ಆನಂತರ ಕಮಲಾಪುರದ ಮಯೂರ ಭುವನೇಶ್ವರಿ ಹೊಟೇಲ್‌ನಲ್ಲಿ ತಂಗಲಿದ್ದಾರೆ.
ಆ.21 ರಂದು ವಿಶ್ವಪ್ರಸಿದ್ಧ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಲಿದ್ದಾರೆ. ಇಲ್ಲಿನ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ, ಕಡಲೆ ಕಾಳು, ಸಾಸಿವೆ ಕಾಳು ಗಣೇಶ ಮಂಟಪಗಳು, ಶ್ರೀಕೃಷ್ಣ ದೇವಸ್ಥಾನ, ಕಮಲ ಮಹಲ, ಗಜಶಾಲೆ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ, ಕಲ್ಲಿನ ತೇರು ಸೇರಿದಂತೆ ನಾನಾ ಸ್ಮಾರಕಗಳನ್ನು ವೀಕ್ಷಿಸಲಿದ್ದಾರೆ. ನಂತರ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಆಗಸ್ಟ್ 22 ರಂದು ವಿಶೇಷ ಹೆಲಿಕಾಪ್ಟರ್‌ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮನದ ಹಿನ್ನೆಲೆಯಲ್ಲಿ ಹಂಪಿಯಲ್ಲಿನ ಸ್ಮಾರಕಗಳ ಸುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಜತೆಗೆ ಸ್ಮಾರಕಗಳಿಗೆ ಕಟ್ಟಿಗೆ ಮೆಟ್ಟಿಲು ಕೂಡ ಜೋಡಿಸಲಾಗಿದೆ. ಬಿಗಿ ಭದ್ರತೆಗೆ ಕ್ರಮ ಕೈಗೊಂಡಿದ್ದು, ಅವರ ಜೊತೆ ಉಪರಾಷ್ಟ್ರಪತಿ ಕಚೇರಿಯ ಕೆಲ ಅಧಿಕಾರಿಗಳು ಕೂಡ ಇರಲಿದ್ದಾರೆ.
ಮಳೆಯಿಂದ ಅಲ್ಲಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸ್ಮಾರಕ ಏರಿ ಇಳಿಯಲು ಸಹಾಯವಾಗುವ ತಾತ್ಕಾಲಿಕ ಕಟ್ಟಿಗೆಯ ಮೆಟ್ಟಿಲು ನಿರ್ಮಿಸಲಾಗುತ್ತಿದೆ.
ಉಪ ರಾಷ್ಟ್ರಪತಿಯವರ ಕಚೇರಿ ಸಿಬ್ಬಂದಿ
ಉಪ ರಾಷ್ಟ್ರಪತಿಯವರ ಕಚೇರಿ ಸಿಬ್ಬಂದಿಗಳು ವೆಂಕಯ್ಯ ನಾಯ್ಡು ಜೊತೆಯಲ್ಲಿ ಆಗಮಿಸುತ್ತಿದ್ದಾರೆ. ಜತೆಗೆ ಸಿಬ್ಬಂದಿಗಳು ವಾಸ್ತವ್ಯ ಮಾಡುವುದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತಿಥಿ ಗೃಹವನ್ನು ಮೀಸಲಿಡಲಾಗಿದೆ ಎಂದು ವಿಶ್ವವಿದ್ಯಾಲಯದವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ನಿಷೇಧ
ಈಗಾಗಲೇ ವಿಜಯನಗರ ಜಿಲ್ಲಾಡಳಿತ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ವಾರಾಂತ್ಯಕ್ಕೆ ಹಂಪಿ ವೀಕ್ಷಣೆಗೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಂಪಿ ಪರಿಸರದಲ್ಲಿಯೇ ಉಳಿಯುವುದರಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಉಪರಾಷ್ಟ್ರಪತಿಯವರ ನಿರ್ಗಮನ
ಹಂಪಿ ವೀಕ್ಷಣೆ ಮಾಡಿದ ಬಳಿಕ ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ, ಆ.22 ರಂದು ಭದ್ರತೆಯೊಂದಿಗೆ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ನಿರ್ಗಮನ ಮಾಡಲಿದ್ದಾರೆ.
ಆಗಸ್ಟ್ 21 ರಂದು ಉಪರಾಷ್ಟ್ರಪತಿಯವರು ಹಂಪಿಗೆ ಭೇಟಿ ಕೊಡಲಿದ್ದು, ಆ ದಿನ ಪ್ರವಾಸಿಗರಿಗೆ ಪ್ರವೇಶದ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಹಂಪಿ ಡಿವೈಎಸ್ಪಿ ಕಾಶಿಗೌಡ ತಿಳಿಸಿದ್ದಾರೆ.












Click it and Unblock the Notifications