ಹಂಪಿಯಲ್ಲಿ ವಿಷ ಸೇವಿಸಿ ಆಂಧ್ರ ಮೂಲದ ಸೋದರಿಯರು ಆತ್ಮಹತ್ಯೆ
ಬಳ್ಳಾರಿ, ಡಿಸೆಂಬರ್ 01: ವಿಶ್ವ ಪ್ರಸಿದ್ದ ಹಂಪಿಗೆ ಬಂದಿದ್ದ ಇಬ್ಬರು ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ರಥ ಬೀದಿಯ ಸಾಲು ಮಂಟಪದಲ್ಲಿ ಈ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನ.30ರ ಸಂಜೆ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟ ಮಹಿಳೆಯರನ್ನು ಕಂಡ ಪುರಾತತ್ವ ಇಲಾಖೆಯ ಸಿಬ್ಬಂದಿ ಪ್ರವಾಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಹಾಸನ; ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಆತ್ಮಹತ್ಯೆ
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮೀನಾಕ್ಷಮ್ಮ (52), ಕಮಲಮ್ಮ (50) ಎಂಬುವರು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ನ.28ರಂದು ಮನೆ ಬಿಟ್ಟು ಹಂಪಿಗೆ ಬಂದಿದ್ದ ಇವರು ಸಾಲು ಮಂಟಪದ ಬಳಿ ಕುಳಿತು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ವಿಷ ಸೇವಿಸಿದ್ದೇಕೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೊಸಪೇಟೆ ನಗರದ ವಿಭಾಗೀಯ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹಗಳನ್ನು ಇರಿಸಲಾಗಿದೆ. ಈ ಕುರಿತು ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಂಗಭದ್ರಾ ನದಿ ಪುಷ್ಕರ ಮಹೋತ್ಸವದ ಕಾರಣ ನದಿಯಲ್ಲಿ ಪುಣ್ಯಸ್ನಾನಕ್ಕೆಂದು ಸಾವಿರಾರು ಜನರು ಸೋಮವಾರ ಹಂಪಿಗೆ ಬಂದಿದ್ದರು. ಈ ನಡುವೆಯೇ ಘಟನೆ ನಡೆದಿದೆ.