ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಅಪಘಾತ; 5 ವರ್ಷದ ಮಗು ಸೇರಿ ಮೂವರ ಸಾವು
ಬಳ್ಳಾರಿ, ಆಗಸ್ಟ್ 24: ಗಣಿ ನಾಡು ಬಳ್ಳಾರಿಯಲ್ಲಿ ಬುಧವಾರ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮದುವೆಯಾಗಿ ಮಕ್ಕಳು ಇದ್ದರೂ ಸರಕಾರಿ ಕೆಲಸ ಪಡೆದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಹಂಬಲದಿಂದ ಪರೀಕ್ಷೆ ಬರೆಯಲು ಹೋಗಿ, ತನ್ನ ಪತಿ ಹಾಗೂ ಮಕ್ಕಳ ಜೊತೆಯಲ್ಲಿ ಮಹಿಳೆ ಕೂಡ ದಾರುಣ ಅಂತ್ಯ ಕಂಡಿದ್ದಾರೆ.
ಗಣಿ ನಾಡು ಬಳ್ಳಾರಿಯ ಹೊಸ ಯರ್ರಗುಡಿ ಗ್ರಾಮದ ವೀರೇಶ್ (38) ಎಂಬಾತ ಪತ್ನಿ ಅಂಜಲಿ(29)ಯನ್ನು ಬಿಎಡ್ ಪರೀಕ್ಷೆಗಾಗಿ ತಮ್ಮ ಮಗ ದಿನೇಶ್(05) ಮಗಳು ಹನಿಜೊತೆಯಲ್ಲಿ ಕರೆದುಕೊಂಡು ಹೋಗುವ ವೇಳೆ ಈ ಅಪಘಾತ ನಡೆದಿದೆ. ಬಳ್ಳಾರಿ ನಗರಕ್ಕೆ ನಾಲ್ಕು ಜನರು ಹೋಗುತ್ತಿದ್ದರು, ಆದರೆ ಬಳ್ಳಾರಿ ಕೌಲ್ ಬಜಾರ್ ಫ್ಲೈ ಓವರ್ ಬಳಿ ಬರುತ್ತಿದ್ದಂತೆ ಹಿಂಬಂದಿಯಲ್ಲಿ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಮೂವರು ಪ್ರಾಣ ಪಕ್ಷಿ ಹಾರಿಹೋಗಿದೆ.

ಮೃತ ವೀರೇಶ್ ಬಳ್ಳಾರಿಯ ಹೊಸ ಯರ್ರಗುಡಿ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಯಮನಂತೆ ಬಂದ ಲಾರಿ ಕುಟುಂಬದ ಮೂವರನ್ನು ಬಲಿ ಪಡೆದಿದೆ. ಇನ್ನು ವಿಷಯ ತಿಳಿದ ಗ್ರಾಮಸ್ಥರು ಸಂಬಂಧಿಗಳು ವಿಮ್ಸ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಣ್ಣು ಮಗು ಹನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಅಜಾಗರೂಕತೆಯಿಂದ ಟಿಪ್ಪರ್ ಚಾಲನೆಯೇ ಘಟನೆ ಕಾರಣ ಎಂದು ಹೇಳಲಾಗುತ್ತಿದೆ. ಟಿಪ್ಪರ್ ಚಾಲಕನನ್ನು ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಆಸ್ಪತ್ರೆಗೆ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ ಈ ಅಪಘಾತಕ್ಕೆ ಪ್ರಮುಖ ಕಾರಣವಾದ ಲಾರಿ ಸಂಚಾರವನ್ನು ನಗರದಲ್ಲಿ ನಿರ್ಬಂಧ ಮಾಡುವುದಕ್ಕೆ ಮೌಖಿಕ ಆದೇಶ ನೀಡಿದ್ದಾರೆ. ಅಲ್ಲದೇ ಕುಟುಂಬಕ್ಕೆ ವೈಯಕ್ತಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಕಳೆದ ಹಲವಾರು ವರ್ಷಗಳ ಹಿಂದೆಯೇ ಲಾರಿಗಳು, ಗೂಡ್ಸ್ ವಾಹನಗಳು ನಗರಕ್ಕೆ ಬರಲು ನಿರ್ಬಂಧವಿತ್ತು . ಆದರೆ ಆದೇಶ ಸರಿಯಾಗಿ ಪಾಲನೆಯಾಗದ ಹಿನ್ನೆಲೆಯಲ್ಲಿ ಈ ಅಪಘಾತ ನಡೆದಿದೆ. ಇನ್ನಾದರೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಗರದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಬೇಕಿದೆ.
ಸೇತುವೆ ಮೇಲಿಂದ ನದಿಗೆ ಬಿದ್ದ ಲಾರಿ; 5 ಮಂದಿ ರಕ್ಷಣೆ ಓರ್ವ ನಾಪತ್ತೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಪಣಸಗುಳಿ ಸೇತುವೆ ಮೇಲೆ ಲಾರಿ ದಾಟಿಸುವಾಗ ನೀರಿನ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ನೀರಿನಲ್ಲಿ ಬಿದ್ದಿದ್ದ 6 ಮಂದಿಯನ್ನು ಐವರನ್ನು ರಕ್ಷಣೆ ಮಾಡಲಾಗಿದೆ, ಆದರೆ ಮತ್ತೊಬ್ಬ ಕಾಣೆಯಾಗಿದ್ದಾರೆ.
ಗಂಗಾವಳಿ ನದಿಗೆ ಕಟ್ಟಲಾಗಿರುವ ಸೇತುವೆ ಮೇಲಿನಿಂದ ಚೀರೆಕಲ್ಲು ಅನ್ಲೋಡ್ ಮಾಡಿ ವಾಪಸ್ ಆಗುತ್ತಿದ್ದ ಲಾರಿಯೊಂದು ನದಿಗೆ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಆರು ಮಂದಿ ಬಿದ್ದಿದ್ದರು. ಆದರೆ ಗುಳ್ಳಾಪುರದಲ್ಲಿ ಜನರನ್ನು ಸಾಗಿಸುವ ಬೋಟ್ ಸಹಾಯದಿಂದ ರಾಜೇಶ್ ಹರಿಕಂತ್ರ, ಸುನೀಲ, ರಾಜು, ಶಿವಾನಂದ, ದಿನೇಶ್ ಎಂಬ ಐವರ ರಕ್ಷಣೆ ಮಾಡಿದ್ದು ಇನ್ನೋರ್ವ ಸಂದೀಪ ಎಂಬುವವರು ಲಾರಿಯ ಒಳಗಡೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಲಾರಿ ಬೀಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ. ಅಲ್ಲದೆ ಸೇತುವೆಗೆ ಎರಡು ಬದಿ ಯಾವುದೇ ಅಡೆ ತಡೆ ಇಲ್ಲ ಮಳೆಗಾಲದಲ್ಲಿ ಸೇತುವೆ ಮೇಲೆಯೇ ತುಂಬಿ ಹರಿಯುತ್ತದೆ. ನೀರಿನ ರಭಸಕ್ಕೆ ಸೇತುವೆ ಬಿಟ್ಟು ಪಕ್ಕಕ್ಕೆ ಲಾರಿ ಉರುಳಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಹಾಗೂ ಸ್ಥಳೀಯರು ಜಮಾಯಿಸಿದ್ದಾರೆ.












Click it and Unblock the Notifications