ಬಳ್ಳಾರಿ; ಕೊರೊನಾದಿಂದ ಹೊರಬಂದ ಮೂವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಬಳ್ಳಾರಿ, ಏಪ್ರಿಲ್ 23: ಬಳ್ಳಾರಿ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಸಂತಸ ಮನೆ ಮಾಡಿತ್ತು. ಆಸ್ಪತ್ರೆಯಲ್ಲಿದ್ದ ಆತಂಕ, ಭಯಕ್ಕೆ ಸ್ವಲ್ಪ ಬ್ರೇಕ್ ಬಿದ್ದಿತ್ತು. ವೈದ್ಯರಲ್ಲಿ ಸಂಭ್ರಮ ತುಂಬಿಕೊಂಡಿತ್ತು. ಇದಕ್ಕೆಲ್ಲ ಕಾರಣ ಕೊರೊನಾದಿಂದ ಗುಣಮುಖರಾದ ರೋಗಿಗಳು.
ಇಂದು ಕೊರೊನಾದಿಂದ ಮೂವರು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಸಂತಸವಾಗಿ ಬೀಳ್ಕೊಡಲಾಯಿತು. ಕೊರೊನಾ ಪಾಸಿಟಿವ್ ಬಾಧಿತರಾಗಿ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರಲ್ಲಿ ಗುಣಮುಖ ಹೊಂದಿದ 3 ಜನರನ್ನು ಇನ್ನೂರಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು. ಗುಣಮುಖ ಹೊಂದಿದ ಮೂವರು ವೈದ್ಯರಿಗೆ ಧನ್ಯವಾದ ಸಲ್ಲಿಸಿದರು.

ಕೊರೊನಾ ಸೋಂಕಿಗೆ ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಿ-89, ಪಿ-91 ಮತ್ತು ಪಿ-141 ರೋಗಿಗಳನ್ನು ಇಂದು ಬಿಡುಗಡೆ ಮಾಡಲಾಯಿತು. ಕೊರೊನಾ ಕಾಣಿಸಿಕೊಂಡಿದ್ದ ಒಂದೇ ಕುಟುಂಬದ 10 ಜನರಲ್ಲಿ ಇದೀಗ ಮೂವರು ಗುಣಮುಖರಾಗಿದ್ದಾರೆ. ಬಿಡುಗಡೆ ಮಾಡುವ ಸಂದರ್ಭ ಇವರಿಗೆಲ್ಲ ಹೂಗುಚ್ಛ ನೀಡಿ ಅಭಿನಂದಿಸಿ ಸಸಿಯೊಂದನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಇವರಿಗೆ ಕೋವಿಡ್-19 ಪರೀಕ್ಷೆಗಳನ್ನು ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿರುವ ಕಾರಣ ಇಂದು ಡಿಸ್ಟಾರ್ಚ್ ಮಾಡಲಾಯಿತು. ಇವರೆಲ್ಲರು ಆರೋಗ್ಯವಾಗಿದ್ದಾರೆ. ಉಳಿದವರ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದು ಡಿಎಚ್ಒ ಡಾ.ಜನಾರ್ಧನ್ ಮತ್ತು ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ತಿಳಿಸಿದ್ದಾರೆ.












Click it and Unblock the Notifications