ರೈತನಾಗಿ ಯಶಸ್ಸುಗಳಿಸಿದ ಬಳ್ಳಾರಿಯ ಇಂಜಿನಿಯರಿಂಗ್ ಪದವೀಧರ

ಬಳ್ಳಾರಿ, ಏಪ್ರಿಲ್ 28: ಬಿಇ ಪದವಿ ಪಡೆದವರು ವಿದ್ಯಾಭ್ಯಾಸದ ಬಳಿಕ ಕೆಲಸ ಹುಡುಕಿಕೊಂಡು ಪಟ್ಟಣ ಸೇರುತ್ತಾರೆ ಎಂಬ ಮಾತಿದೆ. ಆದರೆ ಬಳ್ಳಾರಿಯ ಮೆಕಾನಿಕಲ್ ಇಂಜಿನಿಯರ್ ತೊಟ್ಟ ವಿಜಯ ಕುಮಾರ ವಿದ್ಯಾಭ್ಯಾಸದ ಬಳಿಕ ಕೃಷಿಯನ್ನು ಆಯ್ಕೆ ಮಾಡಿಕೊಂಡು ಈಗ ಮಾದರಿ ರೈತನಾಗಿ ಬದಲಾಗಿದ್ದಾರೆ. ಈ ಯುವ ರೈತನ ಯಶಸ್ಸಿನ ಕಥೆ ಕೃಷಿಯನ್ನು ಬಿಟ್ಟು ಹೋಗುತ್ತಿರುವ ಯುವಕರಿಗೆ ಮಾದರಿಯಾಗಿದೆ.

ರೈತನಾಗುವ ಛಲವನ್ನು ತೊಟ್ಟ ವಿಜಯ ಕುಮಾರ ಮೂಲತಃ ಬಳ್ಳಾರಿ ತಾಲ್ಲೂಕಿನ ಎತ್ತಿನಬೂದಿಹಾಳ್ ಗ್ರಾಮದವರು. ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದಿರುವ ಇವರು ವಿದ್ಯಾಭ್ಯಾಸವನ್ನು ಮುಗಿಸಿ, ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿನಿಂದಲೂ ಕೃಷಿಯ ಬಗ್ಗೆ ಇವರಿಗೆ ಅಪಾರ ಆಸಕ್ತಿ ಇತ್ತು. ಕೃಷಿಯಲ್ಲಿ ಏನಾದರು ಸಾಧನೆ ಮಾಡಬೇಕು ಎಂದು ಕೃಷಿ ಕ್ಷೇತ್ರಕ್ಕೆ ಕಾಲಿಟ್ಟರು.

Success Stories Mechanical Engineer Turned Farmer

ಸಮಗ್ರ ಕೃಷಿಯ ಪಂಡಿತರಾದ ಇವರು ತಮ್ಮ 16 ಎಕರೆ ಜಮೀನಿನಲ್ಲಿ ಹತ್ತಾರು ಬೆಳೆಯನ್ನು ಬೆಳೆಯುವ ಮೂಲಕ ಸುಸ್ಥಿರ ಮತ್ತು ನಿರಂತರ ಆದಾಯಗಳಿಸುವುದರ, ಜೊತೆಗೆ ಒಂದೇ ಬೆಳೆಗೆ ಸೀಮಿತವಾಗದೆ ವೈವಿಧ್ಯ ಬೆಳೆ ಬೆಳೆದು ರಾಜ್ಯಕ್ಕೆ ಆದರ್ಶ ಯುವ ರೈತರಾಗಿದ್ದಾರೆ.

ಮಿಶ್ರ ಬೆಳೆ ಪದ್ಧತಿಯಿಂದ ಒಂದಲ್ಲ ಒಂದು ಬೆಳೆ ನಮ್ಮನ್ನು ಕೈಹಿಡಿಯುತ್ತದೆ ಎಂದು ನಂಬಿದ ತೊಟ್ಟ ವಿಜಯ ಕುಮಾರ ಮಿಶ್ರ ಬೇಸಾಯ ಮಾಡಿ ಯಶಸ್ಸು ಕಂಡುಕೊಂಡಿದ್ದಾರೆ. ತರಕಾರಿ, ಹಣ್ಣು, ಹಸು, ಕೋಳಿ, ಜೇನು ಸಾಗಾಣಿಕೆ ಎಲ್ಲವನ್ನೂ ಸಮಗ್ರವಾಗಿ ನೋಡಿಕೊಳ್ಳುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯವಾಗಿದೆ.

16 ಎಕರೆ ಜಮೀನಿನಲ್ಲಿ ವಿಭಿನ್ನ ಸಮಗ್ರ ಕೃಷಿಯನ್ನು ನೋಡಬಹುದಾಗಿದೆ. ಅದರಲ್ಲಿ ಅತಿಹೆಚ್ಚು ಪೋಷಕಾಂಶ, ಖನಿಜಾಂಶ, ಕಬ್ಬಿಣಾಂಶ ಹೊಂದಿದ ಚಿಕ್ಕೂ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಗಳಿಸುವ ಕೋಳಿ ಸಾಗಾಣಿಕೆ, ಅತ್ಯಮೂಲ್ಯ ಪೌಷ್ಟಿಕಾಂಶದ ಆಹಾರವಾದ ಸೌಂದರ್ಯವರ್ಧಕ ಜೇನು ಸಾಗಾಣಿಕೆ, ನೀರಿನ ಅಂತರ್ಜಲ ಹೆಚ್ಚಿಸಿ, ಕೃಷಿಗೆ ಅನುಕೂಲವಾಗುವ ಕೃಷಿ ಹೊಂಡ, ಮೆಕ್ಕೆಜೋಳ ಮತ್ತು ತೊಗರಿಯ ಮಿಶ್ರ ಬೆಳೆ ಮಣ್ಣಿನ ಪುಷ್ಟೀಕರಣ ಅವರ ಸುಸ್ಥಿರ ಆರ್ಥಿಕ ಲಾಭಕ್ಕೆ ಕಾರಣವಾಗಿದೆ.

ಅಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರುವ ಬದನೆಕಾಯಿ, ಮೆಣಸಿನಕಾಯಿ, ಟೊಮೆಟೊ, ಹುರುಳಿ, ಬೆಂಡೆಕಾಯಿ ಮುಂತಾದ ದಿನಬಳಕೆಯ ತರಕಾರಿಗಳನ್ನು ಸಾವಯವ ಪದ್ದತಿಯಲ್ಲಿ ಬೆಳೆದು ಜನರಿಗೆ ರಾಸಾಯನಿಕ ಮುಕ್ತ ತರಕಾರಿಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷಿಯಲ್ಲಿ ಸಾಧನೆ ಮಾಡಲು, ಅತಿ ಹೆಚ್ಚು ಲಾಭ ಗಳಿಸಲು ಹಲವಾರು ಎಕರೆ ಭೂಮಿ ಇರಬೇಕು ಎಂದೇನಿಲ್ಲ. ಕೆಲವೇ ಕಡಿಮೆ ಜಮೀನು ಇದ್ದರೂ, ಕೊಂಚ ಜಾಣ್ಮೆ ಉಪಯೋಗಿಸಿ ಅದಕ್ಕೆ ತಕ್ಕಂತೆ ಶ್ರಮ ಹಾಕಿದರೆ ವರ್ಷಕ್ಕೆ ಲಕ್ಷ, ಲಕ್ಷ ಆದಾಯ ಗಳಿಸಬಹುದು ಎಂಬುದಕ್ಕೆ ತೊಟ್ಟ ವಿಜಯ ಕುಮಾರ ಸಾಕ್ಷಿಯಾಗಿದ್ದಾರೆ.

ಹಲವಾರು ವಿಶಿಷ್ಟ ಪ್ರಯೋಗದೊಂದಿಗೆ ಎಲ್ಲ ಕೃಷಿಕರಿಗೂ ಮಾದರಿಯಾಗಿ ನಿಂತಿರುವುದು ಬಳ್ಳಾರಿ ತಾಲ್ಲೂಕಿನ ಎತ್ತಿನ ಬೂದಿಹಾಳ್ ಗ್ರಾಮದ ಯುವ ರೈತ. ತೊಟ್ಟ ವಿಜಯ ಕುಮಾರ್ ಅವರ ಯಶಸ್ಸು ಇತರ ರೈತರಿಗೆ ಪ್ರೇರಣೆಯಾಗಿದೆ.

ಹೆಚ್ಚುವರಿ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭ: ಬಳ್ಳಾರಿ ಜಿಲ್ಲೆಯಲ್ಲಿ 2024-25ನೇ ಸಾಲಿನ ಹಿಂಗಾರು ಋತುವಿನಲ್ಲಿ ಬೆಳೆದ ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ ಇರುವ 10 ಖರೀದಿ ಕೇಂದ್ರಗಳ ಜೊತೆಗೆ 2 ಹೆಚ್ಚುವರಿ ನೋಂದಣಿ ಮತ್ತು ಖರೀದಿ ಕೇಂದ್ರ ತೆರೆಯಲಾಗಿದೆ.

ಹೆಚ್ಚುವರಿ ನೋಂದಣಿ ಮತ್ತು ಖರೀದಿ ಕೇಂದ್ರ ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಅರಳಿಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿದೆ. ಬೆಂಬಲ ಬೆಲೆ ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಹಾಗೂ ತಾಲ್ಲೂಕಿನ ತಹಶೀಲ್ದಾರ್, ಕೃಷಿ ಅಧಿಕಾರಿ, ಎ.ಪಿ.ಎಂ.ಸಿ ಕಾರ್ಯದರ್ಶಿ, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

ಬಿಳಿ ಜೋಳ ಖರೀದಿಗೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ. ಬಿಳಿಜೋಳ ಹೈಬ್ರಿಡ್ ರೂ. 3,371 ಮತ್ತು ಬಿಳಿಜೋಳ ಮಾಲ್ದಂಡಿ ರೂ. 3,421. ನೋಂದಣಿ ಮತ್ತು ಖರೀದಿ ಅವಧಿ ಮೇ 31 ಆಗಿದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+