ಬಳ್ಳಾರಿಯಲ್ಲಿ ಹೆಚ್ಚಾದ ಬೀದಿ ನಾಯಿಗಳ ಹಾವಳಿ, ಆಸ್ಪತ್ರೆ ಸೇರಿದ 8 ಜನ
ಬಳ್ಳಾರಿ, ಮೇ, 26: ಬಳ್ಳಾರಿ ನಗರದ ವಿವಿಧೆಡೆ ಬೀದಿ ನಾಯಿಗಳು ಮಕ್ಕಳು ಸೇರಿ ಹಲವರ ಮೇಲೆ ದಾಳಿ ನಡೆಸಿವೆ. ಇದೀಗ ದಾಳಿಗೊಳಗಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಗರದಲ್ಲಿ ಬೀದಿ ನಾಯಿಗಳ ದಾಳಿಯಿಂದ ಎಂಟು ಜನರ ಮೇಲೆ ದಾಳಿ ನಡೆಸಿದ್ದು, ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸವನಕುಂಟೆ ನಿವಾಸಿ ಜಯರಾಮ್ (53), ಹೊರಬಸಪ್ಪ ಗುಡಿಯ ಕಾರ್ತಿಕ್ (46), ಮುಂಡ್ರಗಿಯ ಜಯರಾಮ್ (4), ಶಂಕರ ಬಂಡೆಯ ಪ್ರಜ್ವಲ್ ಕುಮಾರ್ (6), ವಣೆನೂರು ನಿವಾಸಿ ಮಲ್ಲಿಕಾರ್ಜುನ್ ಗೌಡ (50), ಬಾಪೂಜಿನಗರದ ಗಣೇಶ್ (10), ಗುಗ್ಗರಟ್ಟಿಯ ಶಂಕರ್ (28) ಮತ್ತು ಕಾಕರ್ಲ ತೋಟದ ಲಾವಣ್ಯ (12) ಇವರು ನಾಯಿ ಕಡಿತದಿಂದ ಗಾಯಗೊಂಡವರಾಗಿದ್ದಾರೆ.

ಇನ್ನು ಕಳೆದ ವಾರ ಪಟೇಲ್‌ನಗರದ ಸೂರ್ಯಕುಮಾರ್ (11) ಹಾಗೂ ಹನುಮಾನ್‌ನಗರದ ಮಹಮ್ಮದ್ ಫರ್ಹಾನ್ (6) ಅವರಿಗೆ ನಾಯಿ ಕಡಿದಿದ್ದು, ಇವರು ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹೀಗೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಕೂಡ ಸೂಕ್ತ ಕ್ರಮ ಕೈಗೊಳ್ಳದೆ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗೂ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲು ನಿರ್ಲಕ್ಷ್ಯವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆಯೆ ಫೆಬ್ರವರಿ 6ರಂದು ಬಳ್ಳಾರಿ ನಗರದ ವಟ್ಟಪ್ಪಗೇರಿಯಲ್ಲಿ 21 ಜನರಿಗೆ ಹುಚ್ಚು ನಾಯಿ ಕಚ್ಚಿತ್ತು. ಅದರಲ್ಲಿ ಏಳು ಜನ ಮಹಿಳೆಯರು, ಆರು ಮಕ್ಕಳು ಸೇರಿದ್ದರು. ಇದರಲ್ಲಿ 18 ಮಂದಿಗೆ ವಿಮ್ಸ್‌ಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ವೇಳೆ ಬಾಲಕಿಯೊಬ್ಬಳು ಮೃತಪಟ್ಟಿದ್ದರು ಎನ್ನಲಾಗಿತ್ತು.
ಬೀದಿ ನಾಯಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಪ್ಲಾನ್
ಮತ್ತೊಂದೆಡೆ ಮಂಗಳೂರಿನ ಪಚ್ಚನಾಡಿ ಭಾಗದ ಜನರು ನಾಯಿಗಳ ಕಾಟದಿಂದ ಬೇಸತ್ತಿದ್ದರು. ಪ್ರತಿದಿನ ಅವರಿಗೆ ಬೀದಿ ನಾಯಿಗಳ ಜೊತೆಗೆ ಮರಿ ನಾಯಿಗಳದ್ದೇ ಕಿರಿಕಿರಿಯಾಗಿತ್ತು. ತಮ್ಮ ಊರಿನಲ್ಲಿ ನಾಯಿಮರಿಗಳನ್ನು ಬಿಡುವ ಸಾರ್ವಜನಿಕರ ವರ್ತನೆಗೆ ರೋಸಿಹೋಗಿದ್ದ ಜನ ಈಗ ಶಾಶ್ವತ ಪರಿಹಾರದತ್ತ ದೃಷ್ಟಿ ಹಾಯಿಸಿದ್ದರು.
"ಇಲ್ಲಿ ಯಾರು ನಾಯಿಮರಿ ಮತ್ತು ಬೆಕ್ಕು ಮರಿಗಳನ್ನು ತಂದು ಬಿಡುತ್ತಾರೆಯೋ ಅವರು ತಮ್ಮ ಹೆಂಡತಿ ಮಕ್ಕಳನ್ನು ತಂದು ಬಿಡಿ ಸಾಕುತ್ತೇವೆ" ಎಂದು ಒಂದೇ ಒಂದು ವಾಕ್ಯದ ಬ್ಯಾನರ್‌ನಲ್ಲಿ ಇತ್ತೀಚೆಗಷ್ಟೇ ಬರೆಸಿದ್ದರು. ಈ ಒಂದೇ ಒಂದು ವಾಕ್ಯ ಇದೀಗ ನಾಯಿ ಕಾಟವನ್ನು ತಪ್ಪಿಸಿದೆ. ಈ ಕಠೋರ ವಾಕ್ಯದ ಬ್ಯಾನರ್ ಕಂಡಿರುವುದು ಮಂಗಳೂರಿನ ಪಚ್ಚನಾಡಿ ಎಂಬಲ್ಲಿ. ಪಚ್ಚನಾಡಿಯ ಮಂಗಳ ಜ್ಯೋತಿ ಪ್ರದೇಶದಲ್ಲಿ ಸಾರ್ವಜನಿಕರು ಪುಟ್ಟ ಪುಟ್ಟ ನಾಯಿಮರಿಗಳನ್ನು ಬಿಡುತ್ತಿದ್ದರು. ಇದರಿಂದ ರೋಸಿ ಹೋದ ಜನರು, ಈಗ ಮಂಗಳಜ್ಯೋತಿಯಲ್ಲಿ ಈ ಬ್ಯಾನರ್ ಅಳವಡಿಸಿದ್ದರು.
ಮೊದಲೇ ತಾಜ್ಯ ಸಂಸ್ಕರಣಾ ಘಟಕದಿಂದ ಪಚ್ಚನಾಡಿ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಇದರ ಜೊತೆಗೆ ಸಾರ್ವಜನಿಕರು ಪುಟ್ಟ ನಾಯಿ ಮತ್ತು ಬೆಕ್ಕಿನ ಮರಿಯನ್ನೂ ಬಿಡುತ್ತಿದ್ದರಿಂದ ಜನ ಕಿರಿ ಕಿರಿ ಅನುಭವಿಸುತ್ತಿದ್ದರು. ಎಷ್ಟೇ ಪ್ರಯತ್ನ ಪಟ್ಟರೂ ಜನ ನಾಯಿ ಮರಿಗಳನ್ನು ರಸ್ತೆಯ ಬದಿಯಲ್ಲಿ ಬಿಡುವ ಕೆಲಸ ನಿಲ್ಲಿಸದಿರುವುದರಿಂದ ಈ ಈ ಬ್ಯಾನರ್ ಅನ್ನು ಅಳವಡಿಸಲಾಗಿತ್ತು.
ಬೀದಿನಾಯಿಗಳ ಹಾವಳಿ, ಬೇಸತ್ತ ಜನ ಮಂಗಳ ಜ್ಯೋತಿ ಪ್ರದೇಶದಲ್ಲಿ ಮಂಗಳಜ್ಯೋತಿ ಶಾಲೆಯಿರೋದರಿಂದ ಸುಮಾರು 200ಕ್ಕೂ ಅಧಿಕ ಮಕ್ಕಳು ಬೀದಿ ನಾಯಿ ಕಾಟವನ್ನು ಅನುಭವಿಸುತ್ತಿದ್ದಾರೆ. ನಾಯಿಗಳ ದಾಳಿಯಿಂದ ಈಗಾಗಲೇ ಕೆಲವು ಮಕ್ಕಳು ಗಾಯಗೊಂಡಿರುವ ಘಟನೆಯೂ ನಡೆದಿದೆ. ಹೀಗಾಗಿ ಮಕ್ಕಳು ಸಾರ್ವಜನಿಕರಿಗೆ ನಾಯಿಮರಿಗಳನ್ನು ರಸ್ತೆಯಲ್ಲಿ ಬಿಡದಂತೆ ಮನವಿ ಮಾಡಿದ್ದಾರೆ. ಮನೆಯ ನಾಯಿ ಮರಿಗಳನ್ನು ಮನೆಯಲ್ಲಿಯೇ ಸಾಕುವಂತೆ ಜನರಿಗೆ ಮನವಿ ಮಾಡಿದ್ದರು.
ಬೀದಿನಾಯಿಗಳ ಹಾವಳಿ ತಡೆಗೆ ಕ್ರಮ ಮಂಗಳ ಜ್ಯೋತಿ ಶಾಲೆಗೆ ಹೋಗುವ ರಸ್ತೆಗಳಲ್ಲೂ ನಾಯಿಗಳು ತಂಡೋಪತಂಡವಾಗಿ ಓಡಾಡುತ್ತಿರುತ್ತವೆ. ಅಲ್ಲದೇ ಶಾಲೆಯ ಒಳಗಿರುವ ಮಕ್ಕಳ ಮೇಲೂ ದಾಳಿ ಮಾಡುತ್ತಿವೆ. ಮಕ್ಕಳೇ ಹೇಳುವಂತೆ ತರಗತಿ ಒಳಗೂ ನಾಯಿಗಳು ಬಂದು ಆತಂಕ ಸೃಷ್ಟಿಸಿವೆ. ಬೀದಿ ನಾಯಿಗಳು ಚರ್ಮ ರೋಗದಿಂದ ಕೂಡಿದ್ದು, ಮಕ್ಕಳಿಗೆ ರೋಗ ಹರಡುವ ಆತಂಕದಲ್ಲಿದ್ದಾರೆ ಫೋಷಕರಿದ್ದಾರೆ ಎಂದು ತಿಳಿದುಬಂದಿತ್ತು.












Click it and Unblock the Notifications