ಉಪ ಚುನಾವಣೆ: ಸಂಡೂರಿನಲ್ಲಿ ಮನೆ ಮಾಡಿದ ಜನಾರ್ದನ ರೆಡ್ಡಿ!
ಬಳ್ಳಾರಿ, ಅಕ್ಟೋಬರ್ 19: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಧಿಸೂಚನೆ ಪ್ರಕಟವಾಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತಎಣಿಕೆ ನಡೆಯಲಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಪಣ ತೊಟ್ಟಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಮಾಡಿದ್ದಾರೆ. ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಇನ್ನೂ ಘೋಷಣೆಯಾಗಿಲ್ಲ.
ಬಳ್ಳಾರಿಗೆ ಭೇಟಿ ನೀಡಲು ಜನಾರ್ದನ ರೆಡ್ಡಿಗೆ ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಉಪ ಚುನಾವಣೆ ಸಂದರ್ಭದಲ್ಲಿ ಇದು ಬಿಜೆಪಿಗೆ ಶಕ್ತಿ ತುಂಬಿದೆ. ಮತ್ತೊಂದು ಕಡೆ ಶಾಸಕ ಬಿ. ನಾಗೇಂದ್ರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕಾಂಗ್ರೆಸ್ ಉತ್ಸಾಹವನ್ನು ಹೆಚ್ಚಿಸಿದೆ. ಆದ್ದರಿಂದ ಸಂಡೂರು ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಜನಾರ್ದನ ರೆಡ್ಡಿ ಮನೆ: ಸಂಡೂರು ಉಪ ಚುನಾವಣೆ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಬಾಡಿಗೆ ಮನೆ ಮಾಡಿದ್ದಾರೆ. 'ಇಂದು ಶುಭ ಶುಕ್ರವಾರದ ಶುಭ ಮುಹೂರ್ತದಲ್ಲಿ ಬಳ್ಳಾರಿಯ ಸಂಡೂರಿನ ನನ್ನ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮವನ್ನು ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣರವರೊಂದಿಗೆ ನೆರವೇರಿಸಿದೆನು' ಎಂದು ಜನಾರ್ದನ ರೆಡ್ಡಿ ಫೋಟೋ ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಸಹೋದರ ಗಾಲಿ ಸೋಮಶೇಖರ್ ರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಉಪಾಧ್ಯಕ್ಷ ಜಿ. ಟಿ. ಪಂಪಾಪತಿ ಸಂಡೂರಿನ ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಗೃಹ ಪ್ರವೇಶದ ಬಳಿಕ ಜನಾರ್ದನ ರೆಡ್ಡಿ ಸಂಡೂರು ಮಂಡಲದಲ್ಲಿ ಚೂರನೂರು, ದೇವಗಿರಿ, ಸಂಡೂರು ಮತ್ತು ಯಶವಂತನಗರ ಮಹಾಶಕ್ತಿ ಕೇಂದ್ರಗಳ ಉಪಚುನಾವಣೆಯ ಪೂರ್ವಭಾವಿ ಸಭೆಯನ್ನು ನಡೆಸಿದರು. ಉಪ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಕ್ಷೇತ್ರಕ್ಕೆ ಪಕ್ಷದ ಹೈಕಮಾಂಡ್ ಸೂಚಿಸುವ ಅಭ್ಯರ್ಥಿ ಗೆಲುವಿಗೆ ಎಲ್ಲಾ ಶಕ್ತಿ ಕೇಂದ್ರಗಳ ಸದಸ್ಯರು, ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಂಡೂರು ಕ್ಷೇತ್ರ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೈತಪ್ಪಿತ್ತು. ಕಾಂಗ್ರೆಸ್ ಪಾಲಾಗಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇ. ತುಕಾರಾಂ 85,223 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ 49,701 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.
ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಗೆದ್ದ ಬಳಿಕ ಇ. ತುಕಾರಾಂ ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಈಗ ಉಪ ಚುನಾವಣೆ ಎದುರಾಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ, ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸೋತ ಮಾಜಿ ಸಚಿವ ಬಿ. ಶ್ರೀರಾಮುಲು ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಬಿ. ಶ್ರೀರಾಮುಲು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಫೇಸ್‌ಬುಕ್ ಪೋಸ್ಟ್ ಹಾಕಿರುವ ಬಿ. ಶ್ರೀರಾಮುಲು, 'ಮತ್ತೆ ಬಳ್ಳಾರಿ ಬಿಜೆಪಿ ಭದ್ರ ಕೋಟೆಯಾಗಲಿದ್ದು, ಸಂಡೂರು ಚುನಾವಣೆ ಇದಕ್ಕೆ ಮುನ್ನುಡಿ ಆಗಲಿದೆ. ಸಂಡೂರು ಸೇರಿದಂತೆ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವೊಂದೇ ನಮ್ಮ ಗುರಿ. ಬಳ್ಳಾರಿ ಜಿಲ್ಲೆ ಹಾಗು ರಾಜ್ಯದಲ್ಲಿ ಪಕ್ಷದ ಸಂಘಟನೆಯಷ್ಟೇ ನನ್ನ ಮುಂದಿನ ಹೆಜ್ಜೆ. ಸಂಡೂರು ಕ್ಷೇತ್ರಕ್ಕೆ ನಾನು ಆಕಾಂಕ್ಷಿಯೂ ಅಲ್ಲ...ಅಭ್ಯರ್ಥಿಯು ಅಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಈ ಕುರಿತು ಯಾವ ಚರ್ಚೆಯೂ ನಡೆಸಿಲ್ಲ. ಕಾರ್ಯಕರ್ತರಲ್ಲಿ ಈ ಕುರಿತು ಯಾವುದೇ ಗೊಂದಲ ಬೇಡ. ಸಾಮಾನ್ಯ ಕಾರ್ಯಕರ್ತರಾಗಿ ನಾವೆಲ್ಲ ಸಂಡೂರು ಗೆಲುವಿಗೆ ಶ್ರಮಿಸಲಿದ್ದೇವೆ. ಕಾಂಗ್ರೆಸ್‌ಗೆ ಬಳ್ಳಾರಿಯಿಂದ ಗೆಟ್ ಪಾಸ್ ಸಿದ್ಧವಾಗಿದೆ. ನನ್ನ ಹೆಸರು, ಮೋದಿಜಿ ಹೆಸರು ಹೇಳುತ್ತಿರುವ ಕಾಂಗ್ರೆಸ್ ನಾಯಕರಿಗೆ ನನ್ನ ಕಿವಿಮಾತು ಜಮೀರ್ ಅಲ್ಲ, ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ನಿಂತರೂ ಈ ಬಾರಿ ಗೆಲುವು ಬಿಜೆಪಿಯದ್ದೇ. ನಮ್ಮ ಕಾರ್ಯಕರ್ತನ ಶಕ್ತಿ ಮುಂದೆ ಕಾಂಗ್ರೆಸ್ ಧೂಳೀಪಟ ಆಗಲಿದೆ' ಎಂದು ಹೇಳಿದ್ದಾರೆ.
ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಅಕ್ಟೋಬರ್ 25 ಕೊನೆಯ ದಿನವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications