Sandur By Election: ಸಂಡೂರು ಉಪ ಚುನಾವಣೆ, 34 ಲಕ್ಷ ರೂ. ನಗದು ಜಪ್ತಿ
ಬಳ್ಳಾರಿ, ನವೆಂಬರ್ 13: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ 2024ರ ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಜನರು ಮತಗಟ್ಟೆಗಳ ಮುಂದೆ ಮತದಾನ ಮಾಡಲು ಉತ್ಸಾಹದಿಂದ ಕಾದು ನಿಂತಿದ್ದಾರೆ. 2,36,100 ಮತದಾರರು ಹಕ್ಕು ಚಲಾವಣೆ ಮಾಡುವ ಅಧಿಕಾರವನ್ನು ಹೊಂದಿದ್ದಾರೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ನವೆಂಬರ್ 13ರ ಬುಧವಾರ ಬೆಳಗ್ಗೆ 7 ಗಂಟೆಗೆ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಆರಂಭವಾಗಿದೆ. ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಇ. ತುಕಾರಾಂ ಬಳ್ಳಾರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದ್ದರಿಂದ ಈಗ ಉಪ ಚುನಾವಣೆ ನಡೆಯುತ್ತಿದೆ.

ಸಂಡೂರು ವಿಧಾನಸಭೆ ಉಪ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತದಿಂದ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಕ್ಷೇತ್ರದಲ್ಲಿ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಇ. ಅನ್ನಪೂರ್ಣ, ಬಿಜೆಪಿಯಿಂದ ಬಂಗಾರ ಹನುಮಂತ ಅಭ್ಯರ್ಥಿ. ಅಭ್ಯರ್ಥಿಗಳ ಭವಿಷ್ಯ ಇಂದು ಮತಯಂತ್ರವನ್ನು ಸೇರಲಿದೆ. ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದೆ.
ಮತದಾನ ಸುಗಮವಾಗಿ ಸಾಗಲು ಸಿವಿಲ್ ಪೊಲೀಸ್ 676, ಡಿವೈಎಸ್ಪಿ 3, ಪಿಐ 6, ಪಿಎಸ್‌ಐ 14, ಎಎಸ್‌ಐ 22, ಹೆಚ್‌ಸಿ 190, ಕಾನ್ಸ್‌ಟೇಬಲ್ 281, ಗೃಹರಕ್ಷಕ ದಳ 160, ಕೆಎಸ್‌ಆರ್‌ಪಿ 360 ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಒಟ್ಟು 1036 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 127 ಮತಗಟ್ಟೆ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಸೌಲಭ್ಯವಿದೆ.
ಇಂದು ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಒಟ್ಟು 2,36,402 ಮತದಾರರಿದ್ದಾರೆ. 1,17,935 ಪುರುಷ ಮತದಾರರು, 1,18,438 ಮಹಿಳೆ ಮತದಾರರು ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತದಾರರು. ಬೆಳಗ್ಗೆ 7 ಗಂಟೆಗೆ ಒಟ್ಟು 253 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.
ಸಂಡೂರು ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 68 ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ 185 ಮತದಾನ ಕೇಂದ್ರಗಳಿವೆ. ಸಂಡೂರು 17, ತೋರಣಗಲ್ಲು 27 ಮತ್ತು ಚೋರನೂರು 16 ಮತಗಟ್ಟೆ ಸೇರಿ ಒಟ್ಟು 60 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ.
ಎಷ್ಟು ಹಣ ಜಪ್ತಿ?; ನವೆಂಬರ್ 1 ರಿಂದ ನವೆಂಬರ್ 12ರ ಸಂಜೆಯ ತನಕ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ 34,15,598 ರೂ. ನಗದು ಜಪ್ತಿ ಮಾಡಲಾಗಿದೆ. ಹಾಗೆಯೇ 9,49,537 ರೂ. ಮೌಲ್ಯದ 2923.970 ಲೀ. ಮದ್ಯ ಜಪ್ತಿ ಮಾಡಿ, ಒಟ್ಟು 135 ಪ್ರಕರಣ ದಾಖಲಿಸಿಕೊಂಡು 116 ಜನರನ್ನು ಬಂಧಿಸಲಾಗಿದೆ. 6 ದ್ವಿಚಕ್ರ ವಾಹನ, 1 ಲಾರಿ, 1 ಕಾರು ವಶಪಡಿಸಿಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಅಡಿ 3 ಪ್ರಕರಣ ದಾಖಲಾಗಿದ್ದು, ಕಾರು ಮತ್ತು ಕ್ರೇನ್ ವಾಹನ ಜಪ್ತಿ ಮಾಡಲಾಗಿದೆ. ಸಿ-ವಿಜಿಲ್ ತಂತ್ರಾಂಶದಲ್ಲಿ 20 ದೂರು ದಾಖಲಾಗಿದ್ದು, ಇತ್ಯರ್ಥ ಮಾಡಲಾಗಿದೆ.
ಸಂಡೂರು ಕ್ಷೇತ್ರದಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಸ್ವೀಪ್ ಸಮಿತಿ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶೇಕಡಾವಾರು ಮತದಾನ ಎಲ್ಲಾ ಇಲಾಖೆಯವರು ಜಂಟಿಯಾಗಿ ಶ್ರಮಿಸಲು ಕರೆ ನೀಡಲಾಗಿತ್ತು. ಬೆಳಗ್ಗೆ 9 ಗಂಟೆಯ ತನಕ 9.99ರಷ್ಟು ಮತದಾನವಾಗಿದೆ.












Click it and Unblock the Notifications