Sandur By Election: ಸಂಡೂರು ಉಪ ಚುನಾವಣೆ ಶಾಂತಿಯುತ, ಎಷ್ಟು ಮತದಾನ
ಬಳ್ಳಾರಿ, ನವೆಂಬರ್ 13: ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ 2024ರ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆಯ ತನಕ ಶೇ 58.27ರಷ್ಟು ಮತದಾನವಾಗಿತ್ತು. ಉಪ ಚುನಾವಣಾ ಕಣದಲ್ಲಿ 6 ಅಭ್ಯರ್ಥಿಗಳಿದ್ದು, ಕಾಂಗ್ರೆಸ್‌ನ ಇ. ಅನ್ನಪೂರ್ಣ, ಬಿಜೆಪಿಯ ಬಂಗಾರು ಹನುಮಂತು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಇ. ತುಕಾರಾಂ ಬಳ್ಳಾರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಉಪ ಚುನಾವಣೆ ನಡೆಯುತ್ತಿದೆ.

ಬುಧವಾರ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಲಿದ್ದು, ನವೆಂಬರ್ 23ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಉಪ ಚುನಾವಣೆಗೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ಶಾಂತಿಯುತ ಮತದಾನ: ಸಂಡೂರು ಪಟ್ಟಣ, ಕುಡತಿನಿ, ತೋರಣಗಲ್ಲು ಮತ್ತು ವಡ್ಡು ಗ್ರಾಮಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದರು. ಸುಶೀಲಾನಗರ ಗ್ರಾಮದಲ್ಲಿಯೂ ಮಹಿಳೆಯರು ಸಾಲುಗಟ್ಟಿ ನಿಂತು ಮತ ಚಲಾಯಿಸಿದರು. ಕುಡತಿನಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೇ ಕಡೆ ಇರುವ 186, 187, 188 ಮತ್ತು 189 ಮತಗಟ್ಟೆ ಕೇಂದ್ರಗಳಲ್ಲಿ ಮಹಿಳೆಯರು ಸಾಲಾಗಿ ಬಂದು ತಮ್ಮ ಮತ ಚಲಾವಣೆ ಮಾಡಿದರು.
ಮಹಿಳಾ ಮತದಾರರನ್ನು ಆಕರ್ಷಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ತೋರಣಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾರರು ಸಖಿ ಮತಗಟ್ಟೆಗೆ ಆಗಮಿಸಿ, ಮತ ಚಲಾಯಿದರು. ಬಳಿಕ ಅಲ್ಲಿಯೇ ಸ್ಥಾಪಿಸಲಾಗಿದ್ದ ಪಿಂಕ್ ಸೆಲ್ಫಿ ಬೂತ್‌ನಲ್ಲಿ ನಿಂತು ಶಾಹಿ ಹಾಕಿದ ಬೆರಳು ತೋರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಮೊದಲ ಮತ ಚಲಾಯಿಸಿದ ಯುವತಿ: ಉಪ ಚುನಾವಣೆ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲಾಡಳಿತ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಿತ್ತು. ಮತದಾರರ ಪಟ್ಟಿಯಲ್ಲಿ ಪ್ರಥಮ ಬಾರಿಗೆ ಹೆಸರು ನೋಂದಾಯಿಸಿಕೊಂಡಿದ್ದ ಸಂಡೂರು ಪಟ್ಟಣದ ಯುವತಿ ಅವನಿತ್ ಸಂಡೂರು ತಾಲೂಕು ಪಂಚಾಯಿತಿ ಕಛೇರಿಯ ಮತಗಟ್ಟೆ ಸಂಖ್ಯೆ 67ರಲ್ಲಿ ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಿದರು. ವಿವಿಧ ಕಡೆ ಹಿರಿಯರು ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಕರ್ತವ್ಯ ಮೆರೆದರು.
ಸಂಡೂರು ಪಟ್ಟಣದ ಮತಗಟ್ಟೆ ಸಂಖ್ಯೆ 51ರಲ್ಲಿ 91 ವರ್ಷದ ವಯೋವೃದ್ಧೆ ಹುಲಿಗೆಮ್ಮ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಕೃಷ್ಣಾನಗರ ಬಡಾವಣೆಯ ಸರ್ಕಾರಿಯ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 13ರಲ್ಲಿ 78 ವರ್ಷದ ಲಥೀಫ್ ಸಾಬ್ ವೀಲ್‌ಚೇರ್ ಸಹಾಯದೊಂದಿಗೆ ಆಗಮಿಸಿ ಮತದಾನ ಮಾಡಿದರು.
ಮತದಾರರಿಗೆ ಮತ್ತು ಮತಗಟ್ಟೆ ಸಿಬ್ಬಂದಿಗಳಿಗೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ನಿಭಾಯಿಸಲು ಆರೋಗ್ಯ ಇಲಾಖೆಯ ತಂಡದ ಜೊತೆಗೆ ವಿವಿಧ ಅಗತ್ಯ ಔಷಧಿಗಳ ಮೆಡಿಕಲ್ ಕಿಟ್ ಜೊತೆಗೆ ಆಶಾ, ಅಂಗನವಾಡಿ ಕಾರ್ಯಕರ್ತರನ್ನು ಮತಗಟ್ಟೆಗಳ ಬಳಿ ನಿಯೋಜಿಸಲಾಗಿತ್ತು.
ಜಿಲ್ಲಾಡಳಿತ ಮತಗಟ್ಟೆಯಲ್ಲಿ ನೆರಳಿನ ಸೌಲಭ್ಯ ಇಲ್ಲದ ಕಡೆ ಶಾಮಿಯಾನ ವ್ಯವಸ್ಥೆ ಮಾಡಿತ್ತು. ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶೇಷಚೇತನರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಿತ್ತು.












Click it and Unblock the Notifications