Sandur By election: ಸಂಡೂರು ಉಪ ಚುನಾವಣೆ, 27.50 ಲಕ್ಷ ಹಣ ಜಪ್ತಿ
ಬಳ್ಳಾರಿ, ನವೆಂಬರ್ 04: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 13ರಂದು ನಡೆಯಲಿದೆ. ಈ ಪೈಕಿ ಬಳ್ಳಾರಿ ಜಿಲ್ಲೆಯ ಸಂಡೂರು ಸಹ ಸೇರಿದೆ. ಈಗಾಗಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಹಣ, ಉಡುಗೊರೆಗಳ ಸಾಗಾಟದ ಮೇಲೆ ಕಣ್ಗಾವಲು ಇಟ್ಟಿದೆ. ಸಂಡೂರು ಉಪ ಚುನಾವಣೆ ಕಣದಲ್ಲಿ 6 ಅಭ್ಯರ್ಥಿಗಳಿದ್ದಾರೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಸಂಡೂರು ವಿಧಾನಸಭೆ ಉಪ ಚುನಾವಣೆ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳು ಸೂಕ್ತ ದಾಖಲೆ ಇಲ್ಲದ 27.50 ಲಕ್ಷ ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಕಾರಿನಲ್ಲಿ ಈ ಹಣವನ್ನು ಸಾಗಣೆ ಮಾಡಲಾಗುತ್ತಿತ್ತು.

ಉಪ ಚುನಾವಣೆ ಹಿನ್ನಲೆಯಲ್ಲಿ ಸಂಡೂರು ವ್ಯಾಪ್ತಿಯ ಡಿ.ಬಸಾಪುರ ಗ್ರಾಮದಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಭಾನುವಾರ ಸೂಕ್ತ ದಾಖಲೆ ಇಲ್ಲದ 27,50,000 ರೂ. ನಗದು ಹಣವನ್ನು ಈ ಚೆಕ್‌ಪೋಸ್ಟ್‌ನಲ್ಲಿ ಜಪ್ತಿ ಮಾಡಲಾಗಿದೆ.
ಹಣ ಜಪ್ತಿ ಮಾಡಿರುವ ಕುರಿತು ಸಂಡೂರು ವಿಧಾನಸಭೆ ಉಪ ಚುನಾವಣೆಯ ಚುನಾವಣಾಧಿಕಾರಿ ರಾಜೇಶ್. ಹೆಚ್. ಡಿ. ಖಚಿತಪಡಿಸಿದ್ದಾರೆ. ಎಸ್‌ಎಸ್‌ಟಿ ತಂಡದ ಮುಖ್ಯಸ್ಥ ಅಲಗೇರಿ ಲಿಂಗಪ್ಪ ಅವರ ತಂಡವು ಹಣವನ್ನು ಜಪ್ತಿ ಮಾಡಿದೆ ಎಂದು ಹೇಳಿದ್ದಾರೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ 10 ಲಕ್ಷಕ್ಕಿಂತ ಹೆಚ್ಚು ಹಣ ಕಂಡುಬಂದಿದ್ದರಿಂದ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಐಟಿ ಇಲಾಖೆ ಅಧಿಕಾರಿಗಳು ಹಣದ ಮೂಲದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಸಂಡೂರು ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ. ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ. ಸಂಡೂರಿನಲ್ಲಿ ಚುನಾವನಾ ಪ್ರಚಾರ ಬಿರುಸು ಪಡೆದುಕೊಂಡಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಪರವಾಗಿ ಚುನಾವಣಾ ತಂತ್ರ ರೂಪಿಸಿ, ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಕ್ಷೇತ್ರದಲ್ಲಿ ಈ. ಅನ್ನಪೂರ್ಣ ಗೆಲ್ಲಿಸಲು ಪಣ ತೊಟ್ಟಿದ್ದಾರೆ.
ಉಪ ಚುನಾವಣೆಗೆ ಚುನಾವಣಾ ವೆಚ್ಚ ಉಸ್ತುವಾರಿ ನೋಡಿಕೊಳ್ಳಲು ಚುನಾವಣಾ ಆಯೋಗದಿಂದ ಮುರಳಿರಾವ್ ಆರ್. ಜೆ. ಅವರನ್ನು ಚುನಾವಣಾ ವೆಚ್ಚದ ವೀಕ್ಚಕರನ್ನಾಗಿ ನಿಯೋಜಿಸಲಾಗಿದೆ. ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ದೂರುಗಳು ಇದ್ದಲ್ಲಿ ಜನರು 9141142754 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.
ಸಂಡೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಂಡಿದ್ದು, ಪಾರದರ್ಶಕ, ನ್ಯಾಯಸಮ್ಮತ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಚುನಾವಣಾ ಅಕ್ರಮ ಚಟುವಟಿಕೆ ತಡೆಯಲು ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಜಿಲ್ಲೆಯೊಳಗೆ 2, ಅಂತರ್ ಜಿಲ್ಲಾ 4, ಅಂತರ್ ರಾಜ್ಯ ಗಡಿಭಾಗದಲ್ಲಿ 2 ಚೆಕ್‌ಪೋಸ್ಟ್ ಹಾಕಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ ಮೇಲೆ ಕಣ್ಗಾವಲು ಇಡಲು ಹಲವು ತಂಡಗಳನ್ನು ರಚಿಸಲಾಗಿದೆ. ಸಂಡೂರು ವಿಧಾನಸಭಾ ವ್ಯಾಪ್ತಿಯಲ್ಲಿ 20 ಸೆಕ್ಟರ್ ಅಧಿಕಾರಿಗಳು, 9 ಎಫ್‌ಎಸ್‌ಟಿ ತಂಡ, 8 ಎಸ್‌ಎಸ್‌ಟಿ ತಂಡ, 1 ವಿವಿಟಿ ತಂಡ, 3 ವಿಎಸ್‌ಟಿ ತಂಡ, 1 ಸಹಾಯಕ ಚುನಾವಣೆ ವೆಚ್ಚ ವೀಕ್ಷಕರು, 1 ಅಕೌಂಟಿಂಗ್ ತಂಡಗಳನ್ನು ರಚಿಸಲಾಗಿದೆ.












Click it and Unblock the Notifications