ಸೋನಿಯಾ ಗೆದ್ದ ಬಳ್ಳಾರಿಯಲ್ಲಿ ಏ. 26ರಂದು ರಾಹುಲ್ ಪ್ರಚಾರ
ಬಳ್ಳಾರಿ, ಏಪ್ರಿಲ್ 26: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ಶುಕ್ರವಾರ ನಡೆಯುತ್ತಿದೆ. 2ನೇ ಹಂತದ ಮತದಾನ ನಡೆಯುವ 14 ಕ್ಷೇತ್ರಗಳಲ್ಲಿ ಪ್ರಚಾರ ಬಿರುಸಿನಿಂದ ಸಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕೇಂದ್ರದ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಮೇ 7ರ ಮಂಗಳವಾರ ಮತದಾನ ನಡೆಯಲಿದೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂ ಪರವಾಗಿ ಪ್ರಚಾರ ನಡೆಸಲು ರಾಹುಲ್ ಗಾಂಧಿ ಏಪ್ರಿಲ್ 26ರಂದು ಆಗಮಿಸುತ್ತಿದ್ದಾರೆ. ಸೋನಿಯಾ ಗಾಂಧಿ ಗೆದ್ದಿದ್ದ ಕ್ಷೇತ್ರದಲ್ಲಿ ರಾಹುಲ್ ಮತಬೇಟೆ ನಡೆಸಲಿದ್ದು, ಮೇ 7ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.

ವಾಹನ ಸಂಚಾರ ಮಾರ್ಗ ಬದಲಾವಣೆ: ರಾಹುಲ್ ಗಾಂಧಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಜಿಲ್ಲಾಡಳಿತ ವಾಹನ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದೆ. ನಗರದಲ್ಲಿ ಏಪ್ರಿಲ್ 26ರಂದು ನಡೆಯುವ ಖಾಸಗಿ ಕಾರ್ಯಕ್ರಮ ನಿಮಿತ್ತ ರಾಹುಲ್ ಗಾಂಧಿ ತೋರಣಗಲ್ಲು ವ್ಯಾಪ್ತಿಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ರಸ್ತೆ ಮಾರ್ಗವಾಗಿ ಬಳ್ಳಾರಿಗೆ ತೆರಳುವ ಮತ್ತು ಬಳ್ಳಾರಿಯಲ್ಲಿ ಸಭೆ ಮುಗಿಸಿಕೊಂಡು ಪುನಃ ಜಿಂದಾಲ್‍ಗೆ ಬಂದು ದೆಹಲಿಗೆ ತೆರಳಲಿದ್ದಾರೆ.
ಈ ಹಿನ್ನಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಗಣ್ಯ ವ್ಯಕ್ತಿಗಳ ಭದ್ರತೆ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಹಿತದೃಷ್ಟಿಯಿಂದ ಕರ್ನಾಟಕ ಮೋಟರ್ ವಾಹನ ಕಾಯ್ದೆ 1988 ಕಲಂ 115 ರಡಿಯಲ್ಲಿ ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮ 1989 ನಿಯಮ 221ಎ(5) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಏಪ್ರಿಲ್ 26 ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಡೂರು ತಾಲ್ಲೂಕಿನ ಮೈನ್ಸ್‌ಗಳಿಂದ ಹಾಗೂ ಬನ್ನಿಹಟ್ಟಿ ಮತ್ತು ಜಿಂದಾಲ್ ವಿಮಾನ ನಿಲ್ದಾಣದ ಮಾರ್ಗಗಳಿಂದ ಬಳ್ಳಾರಿ ಕಡೆಗೆ ಬರುವ ಮತ್ತು ವಾಪಸ್ ಹೋಗುವ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶಿಸಿದ್ದಾರೆ.
ಬಳ್ಳಾರಿ ನಗರದ ಡಾ. ರಾಜ್‍ಕುಮಾರ್ ರಸ್ತೆಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 26ರಂದು ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಯಲಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಅತೀ ಗಣ್ಯ ವ್ಯಕ್ತಿಗಳ ಭದ್ರತೆ ಹಾಗೂ ಸುಗಮ ಸಂಚಾರ ವ್ಯವಸ್ತೆಯನ್ನು ಕಲ್ಪಿಸುವ ಹಿತದೃಷ್ಟಿಯಿಂದ ಮೋಟರ್ ವಾಹನ ಕಾಯ್ದೆ 1988 ಕಲಂ 115 ರಡಿಯಲ್ಲಿ ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮ 1989 ನಿಯಮ 221ಎ(5) ರನ್ವಯ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
ಏಪ್ರಿಲ್ 26 ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಬಳ್ಳಾರಿ ನಗರದಲ್ಲಿ ಹೊಸಪೇಟೆಯಿಂದ ಸಿರುಗುಪ್ಪ ಕಡೆಗೆ ಹೋಗುವ ಹಾಗೂ ಸಿರುಗುಪ್ಪದಿಂದ ಹೊಸಪೇಟೆ ಮತ್ತು ಬೆಂಗಳೂರು ರಸ್ತೆ ಕಡೆಗೆ ಚಲಿಸುವ ಭಾರೀ ಸರಕು ಸಾಗಣಿಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇ. ತುಕಾರಾಂಗೆ ಬಿಜೆಪಿಯ ಬಿ. ಶ್ರೀರಾಮುಲು ಎದುರಾಳಿ. ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿ ಇದ್ದು, ಮೇ 7ರಂದು ನಡೆಯುವ ಮತದಾನದ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.
ಸೋನಿಯಾ ಗೆದ್ದಿದ್ದ ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 1999ರ ಚುನಾವಣೆಯಲ್ಲಿ ಗೆದ್ದಿದ್ದರು. ಈ ಮೂಲಕ ಸೋನಿಯಾ ಗಾಂಧಿ ಕುಟುಂಬಕ್ಕೂ ಬಳ್ಳಾರಿಗೂ ನಂಟಿದೆ. ಆದ್ದರಿಂದ ರಾಹುಲ್ ಗಾಂಧಿ ಪ್ರಚಾರ ನಡೆಸಲು ಬಳ್ಳಾರಿಗೆ ಆಗಮಿಸುತ್ತಿದ್ದಾರೆ.
1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಿಜೆಪಿ ಅಭ್ಯರ್ಥಿ ಸುಷ್ಮಾ ಸ್ವರಾಜ್‌ರನ್ನು 56,000 ಮತಗಳ ಅಂತರದಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಸೋನಿಯಾ ಸುಷ್ಮಾ ಸ್ಪರ್ಧೆಯ ಕಾರಣಕ್ಕೆ ಬಳ್ಳಾರಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು.












Click it and Unblock the Notifications