ಮಗನ ಹುಡುಕಿ ಕೊಡಲು ವೃದ್ಧ ಗಿಡ್ಡುಸಾಬ್ ಮನವಿ
ಬಳ್ಳಾರಿ, ಡಿ. 3 : ಕಳೆದ ಏಳು ದಿನಗಳಿಂದ ನಾಪತ್ತೆಯಾಗಿರುವ ತಮ್ಮ ಮಗ ಇಬ್ರಾಹಿಂ ಷರೀಫ್ ರನ್ನು ಪತ್ತೆ ಮಾಡಲು ಸಹಾಯ ಮಾಡಬೇಕೆಂದು ದುಃಖದ ಮಡುವಿನಲ್ಲಿರುವ ಷರೀಫ್ ಅವರ ಪೋಷಕರಾದ ಗಿಡ್ಡು ಸಾಬ್ ಮತ್ತು ಬೇಗಂ ದಂಪತಿಗಳು ಪೊಲೀಸರಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಒರಿಸ್ಸಾದ ಭುವನೇಶ್ವರದಲ್ಲಿ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ, ಸಂಡೂರು ಮೂಲದ 34 ವರ್ಷದ ಇಬ್ರಾಹಿಂ ಷರೀಫ್ ಅವರು ಕರ್ತವ್ಯನಿರತರಾಗಿರುವಾಗಲೇ ನಾಪತ್ತೆಯಾಗಿದ್ದರು. ಅವರನ್ನು ಹುಡುಕಲು ಷರೀಫ್ ಅವರ ಸಹೋದರ ಒರಿಸ್ಸಾಗೆ ತೆರಳಿದ್ದರೂ ಇನ್ನೂ ಪತ್ತೆಯಾಗಿಲ್ಲ.

ಸಂಡೂರು ತಾಲೂಕಿನ ಯಶವಂತನಗರ ನಿವಾಸಿ ಗಿಡ್ಡುಸಾಬ್ - ಬೇಗಂ ದಂಪತಿಗಳ ಮಗ ಷರೀಫ್, ಕಳೆದ ಏಳು ದಿನಗಳಿಂದ ಭುವನೇಶ್ವರ ಮನೆಗೆ ಹಿಂದಿರುಗಿಲ್ಲ. ಈ ಕುರಿತು ತೀವ್ರ ಆತಂಕ್ಕೆ ಗುರಿ ಆಗಿರುವ ಪತ್ನಿ ಸಲ್ಮಾ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ನಡೆದಿದೆ.
ನಾಪತ್ತೆ ಆಗಿರುವ ಷರೀಫ್ ಅವರನ್ನು ತ್ವರಿತವಾಗಿ ಹುಡುಕಲು ರಾಜ್ಯ ಪೊಲೀಸರನ್ನು ನಿಯೋಜಿಸಬೇಕೆಂದು ಕೋರಿ ಸರ್ಕಾರಕ್ಕೆ ಷರೀಫ್ ಅವರ ವೃದ್ಧ ತಂದೆ ಗಿಡ್ಡುಸಾಬ್, ಕುಟುಂಬದ ಹಿತೈಷಿಗಳು, ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರು ಈ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಜಾರ್ಜ್ ಹಾಗು ಸಂಬಂಧಿತರಿಗೆ ಶೀಘ್ರವಾಗಿ ರವಾನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ, ಬೆಳಗಾವಿಯ ಸದನದಲ್ಲಿ ಈ ವಿಷಯ ಚರ್ಚೆಗೆ ಬಂದಿದೆ.












Click it and Unblock the Notifications