ಮಹತ್ವದ ಆದೇಶ: ಸಂಡೂರಿನಲ್ಲಿ ಗಣಿಗಾರಿಕೆಗೆ ಒಪ್ಪಿಗೆ ಇಲ್ಲ
ಬಳ್ಳಾರಿ, ಜೂನ್ 23: ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ 'Save Sandur' ಅಭಿಯಾನಕ್ಕೆ ಪ್ರಾಥಮಿಕ ಗೆಲುವು ಸಿಕ್ಕಿದೆ. ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನೀಡಲಾಗಿರುವ ಅರಣ್ಯ ತಿಳುವರಿಯನ್ನು ಅನುಷ್ಠಾನಗೊಳಿಸದಂತೆ ಕರ್ನಾಟಕ ಸರ್ಕಾರ ಟಿಪ್ಪಣಿ ಹೊರಡಿಸಿದೆ.
ಈ ಕುರಿತು ಕರ್ನಾಟಕ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಟಿಪ್ಪಣಿ ಹೊರಡಿಸಿದ್ದಾರೆ. ಆದ್ದರಿಂದ 'ಅರಣ್ಯ ತಿರುವಳಿ ಗುತ್ತಿಗೆ ಪತ್ರ' ಮಾಡಿಕೊಳ್ಳಲಾಗುವುದಿಲ್ಲ ಮತ್ತು ಅರಣ್ಯ ಭೂಮಿಯನ್ನು ಹಸ್ತಾಂತರ ಮಾಡಲಾಗುವುದಿಲ್ಲ.

ಸಂಬಂಧಿಸಿದವರಿಗೆ ಈ ಕುರಿತು ಕೂಡಲೇ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರು ಪತ್ರದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಇವರಿಗೆ ನಿರ್ದೇಶನ ನೀಡಿದ್ದಾರೆ.
ಸಚಿವರ ಟಿಪ್ಪಣಿ ಅಂಶಗಳು: ಸಚಿವರ ಪತ್ರದಲ್ಲಿ ಮೇ॥ ಕೆ.ಐ.ಓ.ಸಿ.ಎಲ್, ಬೆಂಗಳೂರು ಸಂಸ್ಥೆಯು ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್ ಪ್ರದೇಶದಲ್ಲಿ 401.5761 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗಾಗಿ ಅರಣ್ಯ ತಿರುವಳಿ ಪಡೆದಿದ್ದು, ಅರಣ್ಯ ಇಲಾಖೆ ವತಿಯಿಂದ 'ಅರಣ್ಯ ತಿರುವಳಿ ಗುತ್ತಿಗೆ ಪತ್ರ' ಸಹಿಯೂ ಸೇರಿದಂತೆ ಜಮೀನು ಹಸ್ತಾಂತರ ಬಾಕಿ ಇರುವುದನ್ನು ಗಮನಿಸಲಾಗಿದೆ.
ಸದರಿ ಸಂಸ್ಥೆಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಗಣಿಗಾರಿಕೆಯ ಲೋಪದೋಷ/ ಅರಣ್ಯ ಕಾಯ್ದೆ ಉಲ್ಲಘಂನೆಗಳಗಾಗಿ CECಯು ನೀಡಿರುವ ನಿರ್ದೇಶನಗಳನ್ನು ನಿಗದಿತ ಕಾಲಮಿತಿಯಲ್ಲಿ ಸಂಪೂರ್ಣವಾಗಿ ಜಾರಿ ಮಾಡಲು ವಿಫಲವಾಗಿರುವ ಬಗ್ಗೆ ದೂರುಗಳು ಕೇಳಿ ಬಂದಿರುತ್ತವೆ.
ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ, ಕೆ.ಐ.ಓ.ಸಿ.ಎಲ್, ಬೆಂಗಳೂರು ಸಂಸ್ಥೆಯು CEC ನಿರ್ದೇಶನಗಳನ್ನು ಅನುಷ್ಠಾನಗೊಳಿಸುವವರೆಗೆ, ಸದರಿ ಸಂಸ್ಥೆಗೆ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಹಿಲ್ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನೀಡಲಾಗಿರುವ ಅರಣ್ಯ ತಿರುವಳಿಯನ್ನು ಅನುಷ್ಠಾನಗೊಳಸದಂತೆ, ಅಂದರೆ 'ಅರಣ್ಯ ತಿರುವಳಿ ಗುತ್ತಿಗೆ ಪತ್ರ' ಮಾಡಿಕೊಳ್ಳದಂತೆ ಹಾಗೂ ಅರಣ್ಯ ಭೂಮಿಯನ್ನು ಹಸ್ತಾಂತರಿಸದಂತೆ, ಸಂಬಂಧಿಸಿದವರಿಗೆ ಕೂಡಲೇ ಅಗತ್ಯ ಸೂಚಿಸಲು ನಿರ್ದೇಶಿಸಿದೆ ಎಂದು ಹೇಳಿದ್ದಾರೆ.
'Save Sandur' ಅಭಿಯಾನ: ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಓಸಿಎಲ್) ಕಡತಕ್ಕೆ ಕೇಂದ್ರ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ ಸಹಿ ಹಾಕಿದ್ದಾರೆ ಎಂಬ ಮಾಹಿತಿ ತಿಳಿದ ಬಳಿಕ ಸಂಡೂರಿನಲ್ಲಿ ಗಣಿಗಾರಿಕೆಗೆ ವಿರೋಧ ವ್ಯಕ್ತವಾಗಿತ್ತು.
ಗಣಿಗಾರಿಕೆಯನ್ನು ವಿರೋಧಿಸಿ 'ಸೇವ್ ಸಂಡೂರು ಫಾರೆಸ್ಟ್' ಎಂಬ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿತ್ತು. ಗಣಿಗಾರಿಕೆ ಆರಂಭವಾದರೆ ಹಂತ ಹಂತವಾಗಿ 99 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ಪರಿಸರ ಪ್ರೇಮಿಗಳು ಸಂಡೂರಿನಲ್ಲಿ ಗಣಿಗಾರಿಕೆ ನಡೆಸಲು ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದರು. ಗಣಿಗಾರಿಕೆಯಿಂದ ಪರಿಸರ ನಾಶವಾಗಲಿದೆ. ಇದು ಜನ ಜೀವನದ ಮೇಲೆ ಪರಿಣಾಮ ಬೀರಲಿದೆ. ಸಂಡೂರಿನಲ್ಲಿ ಉಳಿದಿರುವ ಅರಣ್ಯವನ್ನಾದರೂ ಸರ್ಕಾರ ಉಳಿಸಿಕೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದರು.
ಸಂಡೂರಿನಲ್ಲಿ ಗಣಿಗಾರಿಕೆ ನಡೆಸುವ ವಿಚಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿಗೆ ಕಾರಣವಾಗಿದೆ. ಕೇಂದ್ರ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಸಚಿವರಾಗಿ ಮಂಡ್ಯದ ಸಂಸದ ಎಚ್. ಡಿ. ಕುಮಾರಸ್ವಾಮಿ ಅಧಿಕಾರವಹಿಸಿಕೊಂಡ ಬಳಿಕ ಮೊದಲು ಸಹಿ ಹಾಕಿದ್ದು ಇದೇ ಕಡತಕ್ಕೆ. ಆದರೆ ಈಗ ರಾಜ್ಯ ಸರ್ಕಾರ ಗಣಿಗಾರಿಕಗೆ ಒಪ್ಪಿಗೆ ನೀಡಿಲ್ಲ.
ಈ ಹಿಂದೆ ಕರ್ನಾಟಕದ ಅರಣ್ಯ ಇಲಾಖೆ ಜೂನ್ 2019 ಮತ್ತು ಫೆಬ್ರವರಿ 2020ರ ನಡುವೆ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆಯ ಪ್ರಸ್ತಾಪವನ್ನು ತಿರಸ್ಕಾರ ಮಾಡಿತ್ತು. ಬಳಿಕ ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಗಣಿಗಾರಿಕೆಗೆ ಒಪ್ಪಿಗೆ ನೀಡಿ ಕೇಂದ್ರ ಸಚಿವರು ಸಹಿ ಹಾಕಿದ್ದರು.












Click it and Unblock the Notifications