ಭೂ ಒತ್ತುವರಿ ಮಾಡಿದ ಮಾಡಿದ ರೈತರ ಮೇಲೆ ಪ್ರಕರಣವಿಲ್ಲ: ಸಚಿವ ಅಶೋಕ್
ವಿಜಯನಗರ, ಸೆ.27 : ಭೂ ಒತ್ತುವರಿ ಪ್ರಕರಣದಲ್ಲಿ ಕಂದಾಯ ಭೂಮಿಯಲ್ಲಿ ವ್ಯವಸಾಯ ಮಾಡುವಂತಹ ರೈತರ ವಿರುದ್ದ ಕೇಸು ಹಾಕದಂತೆ ತಿದ್ದುಪಡಿ ತರಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ಅಂಗವಾಗಿ ಮಿನಿ ವಿಧಾನಸೌಧ ಕಟ್ಟಡವನ್ನು ಉದ್ಘಾಟನೆ ಮಾಡಿ ನಂತರ ಚಂದ್ರಶೇಖರ ಅಜಾದ್ ರಂಗಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಬೇರೆ ಸರ್ಕಾರಗಳು ಇದ್ದಾಗ ಬರಗಾಲವೇ ಇರುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವಾಗಲೆಲ್ಲಾ ಸಮೃದ್ಧವಾಗಿ ಮಳೆಯಾಗುತ್ತಾ ರಾಜ್ಯ ಸುಭಿಕ್ಷವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
"ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾವೇರಿ ನೀರಿನ ವಿಷಯವಿಲ್ಲ. ಎಲ್ಲೆಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನದಿ, ಡ್ಯಾಂ, ಕೆರೆ, ಕಟ್ಟೆಗಳು ತುಂಬುತ್ತಿವೆ. ಕಳೆದ ಮೂರು ವರ್ಷದಲ್ಲಿ ಬರಗಾಲದ ವಿಷಯವೇ ಇಲ್ಲ. ಬಿಜೆಪಿಯಿಂದ ಗೆದ್ದಿರುವ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿರುವುದು ಕಣ್ಣಿಗೆ ಕಾಣುತ್ತಿದೆ. ಕ್ಷೇತ್ರದ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತರುವ ಮೂಲಕ ಜನಸಾಮಾನ್ಯರ ಬವಣೆ ನೀಗಿಸುತ್ತಿದ್ದಾರೆ. ಮಿನಿ ವಿಧಾನಸೌಧ, ಪಟ್ಟಣ ಪಂಚಾಯಿತಿ ಹಾಗೂ ವಾಲ್ಮೀಕಿ ಭವನ ಕಟ್ಟಡಗಳ ನಿರ್ಮಾಣ ಸೇರಿ ಅನೇಕ ಅಭಿವೃದ್ಧಿ ಕೆಲಸ ಮಾಡಿರುವುದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ" ಎಂದು ಹೇಳಿದ್ದಾರೆ.

ರೈತರ ಮೇಲೆ ಪ್ರಕರಣ ದಾಖಲಿಸದಂತೆ ಕಾನೂನು
"ರಾಜ್ಯ ಬಿಜೆಪಿ ಸರ್ಕಾರವು ಅನೇಕ ಉತ್ತಮ ಕಾರ್ಯಗಳನ್ನು ಮಾಡಿದೆ. ಈ ಹಿಂದಿನ ಸರ್ಕಾರದಲ್ಲಿ ಭೂ ಒತ್ತುವರಿ ಮಾಡಿದ ಮಾಡಿದ ರೈತರ ಮೇಲೆ ಕೇಸ್‌ಗಳನ್ನು ಹಾಕಲಾಗಿದೆ. ಆದರೆ, ಬಿಜೆಪಿ ಸರ್ಕಾರವು ಭೂ ಒತ್ತುವರಿ ಮಾಡಿರುವ ರೈತರ ಮೇಲೆ ಕೇಸ್ ಹಾಕದಂತೆ ಕಾನೂನು ಮಾಡಲಾಗಿದೆ. ಅಲ್ಲದೆ, ಮನೆ ಬಾಗಿಲಿಗೇ ಕಂದಾಯ ಇಲಾಖೆ ಧಾವಿಸಿ ಉಚಿತವಾಗಿ ಪಹಣಿ, ಪಿಂಚಣಿ ಆದೇಶ ಸೇರಿ ಇತರೆ ಸೌಲಭ್ಯಗಳು ಸಿಗುವಂತೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
'ಬಗರ್‍ಹುಕುಂ ಕಂದಾಯ ಜಮೀನಿನಲ್ಲಿ ಸಾಗುವಳಿ ಮಾಡುವಂತಹ ರೈತರು ಫಾರಂ ನಂ-54 ನಲ್ಲಿ ಅರ್ಜಿ ಸಲ್ಲಿಸಿದಂತಹ ರೈತರಿಗೆ ಅವರ ಹೆಸರಿನಲ್ಲಿ ಪಟ್ಟ ನೀಡಲಾಗುವುದು. ಫಾರಂ ನಂ.54 ನ್ನು ಸಲ್ಲಿಸಲು ರೈತರಿಗೆ ಒಂದು ವರ್ಷ ಅವಧಿಯನ್ನು ವಿಸ್ತರಿಸಲಾಗಿದೆ' ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.

ಕೂಡ್ಲಿಗಿಯಲ್ಲಿ 10ಎಕರೆ ಜಮೀನನ್ನು ಬಡಜನರ ವಸತಿಗಾಗಿ ಮಂಜೂರು
ಪಿಂಚಣಿ ಫಲಾನುಭವಿಗಳು ಟ್ರೋಲ್‍ಫ್ರೀ ಸಂಖ್ಯೆಗೆ ಕರೆ ಮಾಡಿ ಮನವಿ ಸಲ್ಲಿಸಿದರೆ 72 ಗಂಟೆಗಳಲ್ಲಿ ಮನೆಬಾಗಿಲಿಗೆ ಬಂದು ಯಾವುದೇ ಅರ್ಜಿಯನ್ನು ಪಡೆಯದೇ ಆನ್‌ಲೈನ್ ಮೂಲಕ ಪಿಂಚಣಿ ಸೌಲಭ್ಯವನ್ನು ಒದಗಿಸಲಾಗುವುದು. ಹಟ್ಟಿಗಳಲ್ಲಿ ವಾಸಿಸುತ್ತಿರುವ ಜನರನ್ನು ಗುರುತಿಸಿ ಅವರಿಗೆ ಪಟ್ಟಗಳನ್ನು ಮಾಡಿಕೊಟ್ಟು ಅವರು ವಾಸಿಸುತ್ತಿರುವ ಹಟ್ಟಿಯನ್ನು ಗ್ರಾಮಗಳನ್ನಾಗಿ ಘೋಷಿಸಿ ಎಂದು ಕಂದಾಯ ಸಚಿವ ಅಶೋಕ್ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಕೂಡ್ಲಿಗಿ ತಾಲೂಕಿನಲ್ಲಿ ಸರ್ವೆ ನಂ.480ರ 10 ಎಕರೆ ಜಮೀನನ್ನು ಬಡಜನರ ವಸತಿಗಾಗಿ ಮಂಜೂರು ಮಾಡಲಾಗಿದೆ. ಸ್ಲಂಬೋರ್ಡ್‍ನ 1,000 ಜನರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗಿದ್ದು, ಇನ್ನೂ 2,300 ಜನರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಗೆ 18 ಕೋಟಿಗಳ ಕೊರೊನಾ ಪರಿಹಾರ ನೀಡಲಾಗಿದೆ
ವಿಜಯನಗರ ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆಹಾನಿ ಆದ ರೈತರಿಗೆ ರೂ.1.65 ಕೋಟಿಗಳನ್ನು ಪರಿಹಾರವನ್ನು ನೀಡಲಾಗಿದೆ ಎಂದರು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮರಣ ಹೊಂದಿದ ವ್ಯಕ್ತಿಯ ಕುಟುಂಬದವರಿಗೆ 1.50 ಲಕ್ಷದಂತೆ ಒಟ್ಟು 18 ಕೋಟಿಗಳ ಪರಿಹಾರವನ್ನು ಜಿಲ್ಲೆಗೆ ಒದಗಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ನಮೂನೆ-53 ಮತ್ತು 57 ರ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಕಂದಾಯ ಇಲಾಖೆಯಿಂದ ಆಶ್ರಯ ಯೋಜನೆಗೆ ಮಂಜೂರು ಆಗಿರುವ ಆದೇಶ ಪ್ರತಿಯನ್ನು ಆರ್.ಅಶೋಕ್ ಅವರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.

ಕೂಡ್ಲಿಗಿ ತಾಲೂಕಿನಲ್ಲಿ ಶಿಕ್ಷಣಕ್ಕಾಗಿ 490 ಶಾಲೆಗಳ ನಿರ್ಮಾಣ
ಕಾರ್ಯಕ್ರಮದಲ್ಲಿ ಮಾತನಾಡಿದ ಕೂಡ್ಲಿಗಿ ಕೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ, ನಬಾರ್ಡ್‍ನಿಂದ 500 ಕೋಟಿ ಹಾಗೂ ರಾಜ್ಯದಿಂದ 280 ಕೋಟಿ ಅನುದಾನಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಈ ಭಾಗದ ಒಟ್ಟು 74 ಕೆರೆಗಳನ್ನು ತುಂಬಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಮಂಜೂರು ಮಾಡಿದ 2,500 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಈಗಾಗಲೇ ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ. ಕೂಡ್ಲಿಗಿ ತಾಲೂಕಿನಲ್ಲಿ ಶಿಕ್ಷಣಕ್ಕಾಗಿ 490 ಶಾಲೆಗಳ ನಿರ್ಮಾಣ ಮಾಡಲಾಗಿದ್ದು, ಬಿಸಿ ಊಟ, ರಸ್ತೆ ಸಂಪರ್ಕ ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಲಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ನಿವೇಶನ ರಹಿತ ಬಡಜನರಿಗೆ 2,500 ಆಶ್ರಯ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 5 ಜನರಿಗೆ ಆದೇಶ ಪತ್ರವನ್ನು ವಿತರಿಸಿದ್ದಾರೆ.
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು 15 ಜನ ಫಲಾನುಭವಿಗಳಿಗೆ ವಿವಿಧ ಮಾಶಾಸನ ಆದೇಶ ಪತ್ರ ವಿತರಣೆ ಮಾಡಿದ್ದಾರೆ.












Click it and Unblock the Notifications