Assembly election 2023: ನರೇಂದ್ರ ಮೋದಿಯವರು ವ್ಯಕ್ತಿಯಲ್ಲ, ಅವರು ದೇಶದ ಶಕ್ತಿ: ಹಿಮಂತ ಬಿಸ್ವ
ನರೇಂದ್ರ ಮೋದಿಯವರು ವ್ಯಕ್ತಿಯಲ್ಲ ಅವರು ದೇಶದ ಶಕ್ತಿಯಾಗಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವ ಶರ್ಮಾ ಸಿರಗುಪ್ಪದಲ್ಲಿ ಹೇಳಿದ್ದಾರೆ.
ಬಳ್ಳಾರಿ, ಮಾರ್ಚ್, 14: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳಾದ ಬಳಿಕ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಇದೀಗ ಕಾಂಗ್ರೆಸ್ ಪಕ್ಷ ಸಮುದ್ರ ಸೇರುವ ಕಾಲ ಸನ್ನಿಹಿತವಾಗಿದೆ ಎಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಸಿರಗುಪ್ಪದಲ್ಲಿ ಹೇಳಿದರು. ಹಾಗೆಯೇ ನರೇಂದ್ರ ಮೋದಿಯವರು ವ್ಯಕ್ತಿಯಲ್ಲ ಅವರು ದೇಶದ ಶಕ್ತಿಯಾಗಿದ್ದಾರೆ ಎಂದರು.
ಸಿರಗುಪ್ಪ ನಗರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚೆಗೆ ನಡೆದ ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಹಾಗೆಯೇ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿದೆ. ಗುಜರಾತ್‌ನಲ್ಲಿ ನಡೆದ ಚುನಾವಣೆಯಲ್ಲೂ ಕಮಲ ಅರಳಿದೆ ಎಂದರು.

ಪ್ರತಿಯೊಬ್ಬರೂ ಬಿಜೆಪಿಯನ್ನ ಬೆಂಬಲಿಸಬೇಕು
ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಬಿಜೆಪಿಯನ್ನು ಬೆಂಬಲಿಸಬೇಕು. ಸೆಮಿಫೈನಲ್, ಫೈನಲ್ ಮ್ಯಾಚ್‌ನಲ್ಲೂ ಬಿಜೆಪಿಗೆ ಬೆಂಬಲಿಸಿ ಮತ್ತೋಮ್ಮೆ ಮೋದಿ ಅವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಬೇಕು. ಕಾಂಗ್ರೆಸ್‌ನವರ ಯಾವುದೇ ಬಣ್ಣದ ಮಾತುಗಳಿಗೆ ಕಿವಿಕೊಡದೇ ಅಭಿವೃದ್ಧಿಯನ್ನು ನಿರೀಕ್ಷಿಸಿ ಬಿಜೆಪಿ ಬೆಂಬಲಿಸಿ. ಪ್ರಧಾನಿ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಮಾಜಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲ. ಅವರ ಅವಧಿಯಲ್ಲಿ ಎಟಿಎಂ ಸರ್ಕಾರವಾಗಿದ್ದನ್ನು ಮರೆತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವ್ಯಕ್ತಿಯಲ್ಲ, ಅವರೋಬ್ಬ ದೇಶದ ಶಕ್ತಿ ಇದ್ದಂತೆ. ನವ ಭಾರತ ನಿರ್ಮಾಣಕ್ಕಾಗಿ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಇಲ್ಲ, ಮೋದಿ ಇದ್ದಾರೆ, ಇದನ್ನು ಜನರೇ ಹೇಳುತ್ತಿದ್ದಾರೆ ಎಂದರು.

ಗುವಾಹಾಟಿ ಇಲ್ಲಿಂದ 2700ಕಿ.ಮೀ.ದೂರವಿದೆ. ಇಲ್ಲಿಗೆ ಬಂದ ಮೇಲೆ ಗೂಗಲ್‌ನಲ್ಲಿ ಚೆಕ್ ಮಾಡಿದೆ. ಎಷ್ಟು ದೂರವಿದ್ದರೂ ಎಲ್ಲರ ಮನದಲ್ಲಿ ಮೋದಿ ಅವರಿದ್ದಾರೆ ಎಂದರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ 14 ಲಕ್ಷ ಕೋಟಿ ರೂಪಾಯಿ ಬಜೆಟ್ ಅನ್ನು ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದರು.
ರಾಜ್ಯ & ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭ
ಬಜೆಟ್‌ನಲ್ಲಿ ಎಲ್ಲಾ ವಲಯಕ್ಕೂ ಆದ್ಯತೆ ನೀಡಲಾಗಿದೆ. ರಾಜ್ಯ ಹಾಗೂ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ನಮ್ಮ ನರೇಂದ್ರ ಮೋದಿ ಅವರು ಲಂಡನ್‌ನಲ್ಲಿ ಶ್ರೀ ಬಸವೇಶ್ವರ ಅವರನ್ನು ನೆನೆದು ಸ್ಮರಿಸಿದರೇ, ರಾಹುಲ್ ಬಾಬಾ ವ್ಯಂಗವಾಗಿ ಮಾತಾಡುತ್ತಾರೆ ಎಂದರು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್, ಅನೀಲ್ ನಾಯ್ಡು, ಎಂಎಲ್‌ಸಿ ಸಿದ್ದರಾಜು, ಸಿದ್ದೇಶ್ ಯಾದವ್, ಮುರಹರಗೌಡ, ಬಂಗಾರು ಹನುಮಂತು, ಕೆ.ರಾಮಲಿಂಗಪ್ಪ, ಗಾಳಿ ಶಂಕ್ರಪ್ಪ, ಮೇಕಲ ವೀರೇಶ್, ದಮ್ಮೂರ್ ವೀರೇಶ, ಕರೂರ ಕೊಟೇಶ್ವರ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications