ಮೈಲಾರಲಿಂಗೇಶ್ವರ ಕಾರ್ಣಿಕ 2024: ತುಂಗಭದ್ರಾ ನದಿಗೆ ನೀರು ಬಿಡುಗಡೆ
ಬಳ್ಳಾರಿ, ಫೆಬ್ರವರಿ 19; ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಮೈಲಾರ ಕ್ಷೇತ್ರದಲ್ಲಿ ನಡೆಯುವ ನಾಡಿನ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕದ ಅಂಗವಾಗಿ ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ. ಫೆಬ್ರವರಿ 26ರಂದು ಕಾರ್ಣಿಕ ಮಹೋತ್ಸವ ನಡೆಯಲಿದೆ.
ಜಿಲ್ಲಾಧಿಕಾರಿಗಳ ಕಾರ್ಯಾಲಯ, ವಿಜಯನಗರ ಜಿಲ್ಲೆ ನದಿಗೆ ನೀರು ಹರಿಸುವ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ನದಿ ಮೂಲಕ ನೀರು ಹರಿಸುತ್ತಿದ್ದು, ಅನಧಿಕೃತ ಪಂಪಸೆಟ್‌ಗಳನ್ನು ನಿಷೇಧಿಸುವ ಬಗ್ಗೆ ಸೂಚನೆ ಹೊರಡಿಸಲಾಗಿದೆ.

ಅಧ್ಯಕ್ಷರು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಹಾಗೂ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಅವರ ಆದೇಶ ಉಲ್ಲೇಖ ಮಾಡಿ ಈ ಆದೇಶ ಹೊರಡಿಸಲಾಗಿದೆ.
ವಿವರಗಳು: 2023-24ನೇ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ದಿನಾಂಕ 18/02/2024ರಿಂದ 23/02/2024ರ ವರೆಗೆ ಪ್ರತಿ ದಿನ 500 ಕ್ಯೂಸೆಕ್ಸ್ ನಂತೆ (0.26 ಟಿಎಂಸಿ ಅಡಿ) ನೀರನ್ನು ಹರಿಸಲು ಅನುಮತಿ ನೀಡಲಾಗಿದೆ.
ಈ ಪ್ರಯುಕ್ತ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ನದಿ ದಂಡೆಯಲ್ಲಿ ಅಳವಡಿಸಿರುವ ಅನಧಿಕೃತ ಪಂಪ್‌ಸೆಟ್‌ಗಳಿಂದ ನೀರೆತ್ತುವುದನ್ನು ನಿಷೇಧಿಸುವುದು ಹಾಗೂ ಸದರಿ ಅವಧಿಯಲ್ಲಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲೀ, ಜನರು ಮತ್ತು ದನಕರುಗಳನ್ನು ನದಿಗೆ ಇಳಿಸುವುದಾಗಲೀ ಹಾಗೂ ನಿರ್ಮಾಣ ಕಾಮಗಾರಿಗಳನ್ನು ನದಿಯಲ್ಲಿ ನಡೆಸುವುದು ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡುವುದು ಸೂಕ್ತವೆಂದು ತಿಳಿದು ಈ ಆದೇಶ ಹೊರಡಿಸಲಾಗಿದೆ ಎಂದು ಹೇಳಿದೆ.
ಲಕ್ಷಾಂತರ ಭಕ್ತರು ಸೇರುತ್ತಾರೆ: ಹೂವಿನಹಡಗಲಿಯ ಮೈಲಾರ ಕ್ಷೇತ್ರದಲ್ಲಿ ನಡೆಯುವ ನಾಡಿನ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಬಾರಿಯ ಕಾರ್ಣಿಕಕ್ಕೆ ಸುಮಾರು 20 ಲಕ್ಷ ಜನರು ಸೇರುವ ನಿರೀಕ್ಷೆ ಇದೆ.
ಬರ ಪರಿಸ್ಥಿತಿಯ ಕಾರಣ ನಾಡಿನ ಜಲಾಶಯಗಳಲ್ಲಿ ಈ ಬಾರಿ ನೀರಿನ ಕೊರತೆ ಇದೆ. ಭದ್ರಾ ಜಲಾಶಯದಲ್ಲಿಯೂ ನೀರು ಕಡಿಮೆ ಇದ್ದು, ಕುಡಿಯುವ ನೀರಿಗಾಗಿ ಶೇಖರಣೆ ಮಾಡಲಾಗಿದೆ. ಈಗ ವಿಶೇಷ ಸಂದರ್ಭ ಎಂದು ಪರಿಗಣಿಸಿ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ.
ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕ ಜಾತ್ರೆಯ ಅಂಗವಾಗಿ ಪ್ರತಿವರ್ಷವೂ ನದಿಗೆ ನೀರು ಹರಿಸಲಾಗುತ್ತಿದೆ. ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ವಿಜಯನಗರ ಜಿಲ್ಲಾಡಳಿತ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡುತ್ತದೆ.
ಈ ಬಾರಿ ಪ್ರತಿವರ್ಷಕ್ಕಿಂತ ಹೆಚ್ಚಿನ ಭಕ್ತರು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ಹೇಳಿದ್ದಾರೆ. ಪ್ರತಿವರ್ಷದಂತೆ ನದಿಗೆ ನೀರು ಹರಿಸಲು ಜಲಸಂಪನ್ಮೂಲ ಇಲಾಖೆಗೆ ಮನವಿ ಸಲ್ಲಿಕೆ ಮಾಡಲಾಗಿತ್ತು.
ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆ ಮತ್ತು ಕಾರ್ಣಿಕೋತ್ಸವಕ್ಕೆ ಜಾತ್ರೆಯು ಕಾರ್ಣಿಕ ನುಡಿ ಕೇಳಲು ಲಕ್ಷಾಂತರ ಭಕ್ತರು ಸೇರುತ್ತಾರೆ. ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳುವ ಹಾಗೆ ಧ್ವನಿವರ್ಧಕ ವ್ಯವಸ್ಥೆ ಮತ್ತು ಕಾರ್ಣಿಕ ನುಡಿಯನ್ನು ಸೆರೆಯಿಡಿಯಲು ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಂಡು ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತದೆ. ಕಾಣಿಕೆ ನುಡಿಯನ್ನು ರಾಜ್ಯದ ಮುಖ್ಯ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಜಾತ್ರೆ ಸಂದರ್ಭದಲ್ಲಿ ಲಾರಿ, ಟ್ರ್ಯಾಕ್ಟರ್, ಎತ್ತಿನ ಬಂಡಿ, ಲಘು ವಾಹನ, ಕಾರು, ಆಟೋ, ಮಿನಿ ಬಸ್ ಬಸ್ಸು, ಲಾರಿ, ಇತ್ಯಾದಿ ವಾಹನಗಳು ಮೈಲಾರ ಗ್ರಾಮಕ್ಕೆ ಬಾರದಂತೆ ಅಗತ್ಯ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗುತ್ತದೆ.












Click it and Unblock the Notifications